ಬೆಂಗಳೂರು: ನಗರದ ಹೊಸಪಾಳ್ಯದಲ್ಲಿರುವ ಬಾಯ್ಸ್ ಪಿಜಿಯೊಂದಕ್ಕೆ ತಡರಾತ್ರಿ ನುಗ್ಗಿದ ಕಳ್ಳರು, ನಿವಾಸಿಗಳು ಚಾರ್ಜಿಂಗ್‌ಗೆ ಇಟ್ಟಿದ್ದ 8 ದುಬಾರಿ ಮೊಬೈಲ್ ಫೋನ್‌ಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಹೊಸಪಾಳ್ಯದ ಕೂಡ್ಲು ಮುಖ್ಯ ರಸ್ತೆಯಲ್ಲಿರುವ ಸಾಯಿ ಆರಾಧ್ಯ ಲಕ್ಸುರಿ ಬಾಯ್ಸ್ ಪಿಜಿಯಲ್ಲಿ ಈ ಕಳ್ಳತನ ನಡೆದಿದೆ. ಪಿಜಿಯಲ್ಲಿ ವಾಸವಾಗಿರುವ 27 ವರ್ಷದ ಕ್ಯಾಬ್ ಚಾಲಕ ದರ್ಶನ್ ನೀಡಿದ ದೂರಿನ ಮೇರೆಗೆ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 28ರ ರಾತ್ರಿ ಕೆಲಸ ಮುಗಿಸಿ ಪಿಜಿಗೆ ಬಂದಿದ್ದ ದರ್ಶನ್ ತಮ್ಮ ಎರಡು ಮೊಬೈಲ್ ಫೋನ್‌ಗಳನ್ನು ಚಾರ್ಜಿಂಗ್‌ಗೆ ಇಟ್ಟು ಮಲಗಿದ್ದರು. ಅದೇ ರೀತಿ ಅವರ ಸ್ನೇಹಿತರು ಹಾಗೂ ಪಕ್ಕದ ಕೊಠಡಿಗಳ ನಿವಾಸಿಗಳು ಸಹ ತಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜಿಂಗ್‌ಗೆ ಇಟ್ಟಿದ್ದರು.
ಮೇ 29ರ ಬೆಳಗ್ಗೆ ಎದ್ದು ನೋಡಿದಾಗ ದರ್ಶನ್ ಅವರ ಮೊಬೈಲ್ ಫೋನ್‌ಗಳು ಕಾಣೆಯಾಗಿದ್ದವು. ನಂತರ ಇತರ ಕೊಠಡಿಗಳಲ್ಲಿ ಪರಿಶೀಲನೆ ನಡೆಸಿದಾಗ ಒಟ್ಟು 8 ಮೊಬೈಲ್ ಫೋನ್‌ಗಳು ಕಳ್ಳತನವಾಗಿರುವುದು ಗೊತ್ತಾಗಿದೆ.
ಪಿಜಿಯಲ್ಲಿ ಭದ್ರತಾ ಸಿಬ್ಬಂದಿ ಇರದಿರುವುದು ಹಾಗೂ ನಿವಾಸಿಗಳು ರಾತ್ರಿ ವೇಳೆ ಕೊಠಡಿಗಳ ಬಾಗಿಲುಗಳನ್ನು ಲಾಕ್ ಮಾಡದೇ ಮಲಗಿರುವುದನ್ನು ಕಳ್ಳರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಇಬ್ಬರು ಕಳ್ಳರು ಮಧ್ಯರಾತ್ರಿ ಕಟ್ಟಡದೊಳಗೆ ಪ್ರವೇಶಿಸಿ ಮೊಬೈಲ್ ಫೋನ್‌ಗಳನ್ನು ಕದ್ದು ಪರಾರಿಯಾಗಿರುವುದು ದಾಖಲಾಗಿದೆ. ಸದ್ಯ ಬಂಡೇಪಾಳ್ಯ ಪೊಲೀಸರು ಸಿಸಿಟಿವಿ ದೃಶ್ಯಗಳು ಹಾಗೂ ಇತರ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
















