ಬಳ್ಳಾರಿ: ಮಂತ್ರಾಲಯದ ಸಮೀಪದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಮತ್ತು ಮೀನುಗಾರರ ಸಹಾಯದಿಂದ ಹೊರತೆಗೆದಿದ್ದಾರೆ.
ಮೃತರನ್ನು ಮಂತ್ರಾಲಯ ನಿವಾಸಿಗಳಾದ 25 ವರ್ಷದ ರಾಘವೇಂದ್ರ, 23 ವರ್ಷದ ಧನುಷ್, 22 ವರ್ಷದ ಸಂಧ್ಯಾ, ಹೈದರಾಬಾದ್ ಮೂಲದ 35 ವರ್ಷದ ಸತೀಶ್ ಹಾಗೂ 5 ವರ್ಷದ ಯುವನ ಚಂದ್ರ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಪರ್ಣಾ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾಹಿತಿಯ ಪ್ರಕಾರ, ಮೃತರು ಮಂತ್ರಾಲಯದಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಯೋಜಿಸಿದ್ದ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಪೂಜೆಯ ಬಳಿಕ ತುಂಗಭದ್ರಾ ನದಿಗೆ ಈಜಲು ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಮ್ಮಿಗನೂರು ಡಿವೈಎಸ್ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸ್ಥಳೀಯ ಮೀನುಗಾರರು ಹಾಗೂ ರಕ್ಷಣಾ ಸಿಬ್ಬಂದಿಯ ಸಹಾಯದಿಂದ ನದಿಯಲ್ಲಿ ಹುಡುಕಾಟ ನಡೆಸಿ ಐವರ ಮೃತದೇಹಗಳನ್ನು ಹೊರತೆಗೆದರು.ಈ ಸಂಬಂಧ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

















