ಮನೆ ಅಪರಾಧ ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು: ಆರೋಪಿಗಳ ಬಂಧನ

ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು: ಆರೋಪಿಗಳ ಬಂಧನ

0

ಬೆಂಗಳೂರು: ನಿರ್ಮಾಪಕ ಉಮಾಪತಿ ಹಾಗೂ ಇತರರ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ದರ್ಶನ್‌ ಮತ್ತು ಸಂಜು ಬಂಧಿತರಾಗಿದ್ದು, ಆರೋಪಿಗಳು ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದರು.

ಸುಂಕದಕಟ್ಟೆಯ ಬಾರ್‌ವೊಂದರ ಬಳಿ ಇರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ರಾಬರಿ, ಕಳವು, ಕೊಲೆ ಯತ್ನ, ಸುಲಿಗೆ ಸೇರಿದಂತೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ತನಿಖೆಗಾಗಿ ಜಯನಗರ ಪೊಲೀಸರಿಗೆ ಆರೋಪಿಗಳನ್ನು ಒಪ್ಪಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.


ಪ್ರಕರಣದ ಹಿನ್ನೆಲೆ: ಭೂಗತ ಪಾತಕಿ ಬಾಂಬೆ ರವಿ ಸೂಚನೆ ಮೇರೆಗೆ ಅರೋಪಿಗಳು ನಿರ್ಮಾಪಕ ಉಮಾಪತಿ ಗೌಡ, ಅವರ ಸಂಬಂಧಿ ದೀಪಕ್‌, ಕುಖ್ಯಾತ ರೌಡಿಶೀಟರ್‌ಗಳಾದ ಸೈಕಲ್‌ ರವಿ ಹಾಗೂ ಬೇಕರಿ ರಘು ಅವರನ್ನು ಹತ್ಯೆಗೈಯಲು ಸಂಚು ರೂಪಿಸಲಾಗಿತ್ತು. ಈ ಸಂಬಂಧ ಆರೋಪಿಗಳು 2020ರ ಡಿಸೆಂಬರ್‌ 20 ರಂದು ಜಯನಗರ ಠಾಣೆ ವ್ಯಾಪ್ತಿಯ ನ್ಯಾಷನಲ್‌ ಕಾಲೇಜು ಮೈದಾನದ ಬಳಿ ಟೆಂಪೋ ಟ್ರಾವೆಲರ್‌ ವಾಹನದಲ್ಲಿ ಸುಮಾರು 10ಕ್ಕೂ ಅಧಿಕ ಮಂದಿ ಮಾರಕಾಸ್ತ್ರಗಳ ಸಮೇತ ಕುಳಿತಿದ್ದರು. ಅದೇ ವೇಳೆ ಗಸ್ತು ತಿರುಗುತ್ತಿದ್ದ ಜಯನಗರ ಠಾಣೆ ಸುದರ್ಶನ್‌ ಅನುಮಾನಗೊಂಡು ವಾಹನ ಪರಿಸೀಲಿಸಿದಾಗ ಆರೋಪಿಗಳು ಅವರ ಮೇಲೆಯೇ ವಾಹನ ಹತ್ತಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ವೇಳೆ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಅವರ ಮಾಹಿತಿ ಮೇರೆಗೆ ಸುಮಾರು ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಆದರೆ, ಈ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹಿಂದಿನ ಲೇಖನಇಂದಿನ ದಿನ ಭವಿಷ್ಯ
ಮುಂದಿನ ಲೇಖನನಾಯಕನಾಗಿ ಕೆ.ಎಲ್.ರಾಹುಲ್ ಉತ್ತಮ ಕಾರ್ಯ: ರಾಹುಲ್ ದ್ರಾವಿಡ್