ಮೈಸೂರು : ಮೈಸೂರಿನಲ್ಲಿ ಶಿಶುಮರಣ ಸಂಖ್ಯೆ ನಿಲ್ಲದೆ ಸಾಗುತ್ತಿದ್ದು, ಕಳೆದ 15 ತಿಂಗಳಲ್ಲಿ ಚೆಲುವಾಂಬ ಆಸ್ಪತ್ರೆಯಲ್ಲೇ 551 ನವಜಾತ ಶಿಶುಗಳ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಲ್ಲದೆ, ಕಳೆದ 3 ತಿಂಗಳಲ್ಲೇ ಸುಮಾರು 110 ಶಿಶುಗಳು ಸಾವನ್ನಪ್ಪಿದ್ದು,ಇದರಲ್ಲಿ ಅವಧಿ ಪೂರ್ಣ ಜನಿಸಿದ ಮಕ್ಕಳೇ ಹೆಚ್ಚಾಗಿದ್ದಾರೆ. ಅದರಲ್ಲೂ ಪ್ರಮುಖವಾಗಿ ಚೆಲುವಾಂಬಾ ಆಸ್ಪತ್ರೆಗೆ ಮೈಸೂರು ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಮಹಿಳೆಯರು ದಾಖಲಾಗುತ್ತಿದ್ದು, ಇದರಲ್ಲಿ ಹೆಚ್ಚಿನ ಪ್ರಕರಣಗಳು ಆಸ್ಪತ್ರೆಗೆ ಬರುವ ಮೊದಲೇ ಗಂಭೀರವಾಗಿರುತ್ತದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಶಿಶುಮರಣ ಹೆಚ್ಚಳಕ್ಕೆ ಕಾರಣವೇನು ಎಂಬ ಮಾಹಿತಿ ತಿಳಿಯಿರಿ..
ಸಿಎಂ ತವರಲ್ಲಿ ನಿಲ್ಲದ ಶಿಶು ಮರಣ, ಕಳೆದ 15 ತಿಂಗಳಲ್ಲಿ ಚೆಲುವಾಂಬ ಆಸ್ಪತ್ರೆಯಲ್ಲೇ 551 ನವಜಾತ ಶಿಶುಗಳ ಸಾವು, ಅವಧಿ ಜನಿಸಿದ ಮಕ್ಕಳೇ ಹೆಚ್ಚು, ಜಿಲ್ಲೆಯಲ್ಲಿ ಶಿಶು ಮರಣಕ್ಕೆ ಕಾರಣಗಳೇನು? ಆಸ್ಪತ್ರೆ ಹೇಳುವುದೇನು? ಮುಖ್ಯಮಂತ್ರಿ ತವರು’ ಮೈಸೂರಿನ ಚೆಲುವಾಂಬ ಆಸ್ಪತ್ರೆ ಒಂದರಲ್ಲೇ ಕಳೆದ 15 ತಿಂಗಳಲ್ಲಿ551 ನವಜಾತ ಶಿಶುಗಳು ಮೃತಪಟ್ಟಿವೆ. ಅದರಲ್ಲೂ ಈ ವರ್ಷದ ಮೂರು ತಿಂಗಳ ಅವಧಿಯಲ್ಲಿ 110 ಮಕ್ಕಳು ಮರಣ ಹೊಂದಿರುವುದು ತೀವ್ರ ಕಳವಳ ಮೂಡಿಸಿದೆ.
ಮೈಸೂರು ಸಾಕ್ಷರತೆ ಪ್ರಮಾಣದಲ್ಲಿ ಮುಂದುವರಿದಿದ್ದರೂ, ಆಧುನಿಕ ತಂತ್ರಜ್ಞಾನಗಳ ಲಭ್ಯತೆ ಇದ್ದರೂ ಹೆರಿಗೆ ಸಮಯದಲ್ಲಿ ನವಜಾತ ಶಿಶುಗಳು ಮೃತಪಡುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅದರಲ್ಲೂ ಮಹಿಳೆಯರಲ್ಲಿ ಉಂಟಾಗುವ ರಕ್ತಹೀನತೆ, ಅಪೌಷ್ಟಿಕತೆ ಹಾಗೂ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಶ್ವಾಸಕೋಶ ಸಮಸ್ಯೆ ಹಾಗೂ ಕಡಿಮೆ ತೂಕದಿಂದ ನವಜಾತ ಶಿಶುಗಳು ಮೃತಪಡುತ್ತಿರುವುದು ಆತಂಕಕಾರಿಯಾಗಿದೆ.
ಕಳೆದ ವರ್ಷ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಚೆಲುವಾಂಬ ಆಸ್ಪತ್ರೆಯಲ್ಲಿ 3721 ಹೆರಿಗೆಗಳಾಗಿವೆ. ಇದರಲ್ಲಿ 441 ನವಜಾತ ಶಿಶುಗಳು ಮೃತಪಟ್ಟಿದ್ದು, ಮರಣ ಪ್ರಮಾಣ ಶೇ. 11.8ರಷ್ಟಿದೆ. ಅದೇ ರೀತಿ ಈ ವರ್ಷ ಜನವರಿಯಿಂದ ಮಾರ್ಚ್ ವರೆಗೂ 1026 ಹೆರಿಗೆಗಳಾಗಿದ್ದು, 110 ಶಿಶುಗಳು ಮೃತಪಟ್ಟಿವೆ. ಮರಣ ಪ್ರಮಾಣ ಶೇ. 10.7ರಷ್ಟಿದೆ.
ಗಂಭೀರ ಸ್ವರೂಪದ ಪ್ರಕರಣಗಳು ಹೆಚ್ಚು ಚೆಲುವಾಂಬ ಆಸ್ಪತ್ರೆಗೆ ಬರುತ್ತಿರುವುದರಿಂದ ಹಾಗೂ ಅವಧಿಪೂರ್ವ ಶಿಶುಗಳ ಜನನದಿಂದ ಮರಣ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ನವಜಾತ ಶಿಶುಗಳ ಮರಣದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು (ಎಐಎಂಎಸ್ಎಸ್) ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದೆ.
ಚೆಲುವಾಂಬ ಆಸ್ಪತ್ರೆ ಹೇಳುವುದೇನು? – ಮೈಸೂರು ಜಿಲ್ಲೆಯಲ್ಲೇ ಪ್ರಸೂತಿ, ಸ್ತ್ರೀರೋಗ ಹಾಗೂ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಮಹಾರಾಜರು ಕಟ್ಟಿಸಿದ ಚೆಲುವಾಂಬ ಆಸ್ಪತ್ರೆ ಹೆಸರುವಾಸಿಯಾಗಿದೆ. ಈ ಆಸ್ಪತ್ರೆಗೆ ಬಡವರು ಹಾಗೂ ಮಧ್ಯಮ ವರ್ಗದ ಮಂದಿಯೇ ಹೆಚ್ಚು ಬರುತ್ತಾರೆ. ಕೇವಲ ಮೈಸೂರಷ್ಟೇ ಅಲ್ಲದೆ, ನೆರೆಯ ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಭಾಗಗಳಿಂದಲೂ ಗರ್ಭಿಣಿಯರು ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಾರೆ.
ಇಲ್ಲಿಗೆ ಹೆರಿಗೆಗೆ ಬರುವಾಗಲೇ ಎಷ್ಟೋ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿರುತ್ತವೆ. ತೀವ್ರ ನಿಗಾ ಘಟಕಕ್ಕೆ ದಾಖಲಿಸಬೇಕಾಗಿರುತ್ತದೆ. ಜತೆಗೆ ಅವಧಿಪೂರ್ವ ಮಕ್ಕಳ ಜನನವೇ ಹೆಚ್ಚು. ಇದರಿಂದ ಮಕ್ಕಳಲ್ಲಿ ಶ್ವಾಸಕೋಶ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇಂತಹ ಹಲವು ಕಾರಣಗಳಿಂದ ನವಜಾತ ಶಿಶುಗಳ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಮಕ್ಕಳ ಜೀವ ರಕ್ಷಣೆಯಲ್ಲಿ ಶೇ. 100ರಷ್ಟು ಪ್ರಯತ್ನ ಹಾಕಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಶಿಶುಗಳ ಮರಣ ಕಡಿಮೆಯಾಗುತ್ತಿದೆ,’’ ಎಂದು ಎಂಎಂಸಿಆರ್ಐ ಡೀನ್ ಡಾ.ದ್ರಾಕ್ಷಾಯಿಣಿ ತಿಳಿಸಿದ್ದಾರೆ.
ಶಿಶು ಮರಣ ಹೆಚ್ಚಳಕ್ಕೆ ಕಾರಣಗಳೇನು?
- ತೀವ್ರ ಗಂಭೀರ ಸ್ವರೂಪ ಇರುವ ಪ್ರಕರಣಗಳು ಆಸ್ಪತ್ರೆಗೆ ಬರುತ್ತಿರುವುದು.
- ಅವಧಿ ಪೂರ್ವ ಮಗು ಜನನ (28 ವಾರಗಳಿಗೆ ಹೆರಿಗೆ ಆಗುವುದು)
- ಗ್ರಾಮೀಣ ಭಾಗಗಳಲ್ಲಿ ಗರ್ಭಿಣಿಯರಿಗೆ ಅರಿವಿನ ಕೊರತೆ.
- ಮಹಿಳೆಯರಲ್ಲಿ ರಕ್ತಹೀನತೆ ಹಾಗೂ ಅನಾರೋಗ್ಯ ಇರುವುದು.
- ಶಿಶುಗಳಲ್ಲಿ ಕಂಡು ಬರುವ ಶ್ವಾಸಕೋಶ, ಕಡಿಮೆ ತೂಕ ಸಮಸ್ಯೆ.
ಚೆಲುವಾಂಬ ಆಸ್ಪತ್ರೆಯ ಎನ್ಐಸಿಯು, ಎಸ್ಎನ್ಸಿಯುಗೆ ದಾಖಲಾತಿ ವಿವರ, ವರ್ಷ, ದಾಖಲಾತಿ, ಮರಣ, ಶೇಕಡವಾರು..,
2021 : 3046 : 654 : 21.4
2022 : 3604 : 603 : 16.7
2023 : 3487 : 477 : 13.6
2024 : 3101 : 416 : 13.4
2025 : 3721 : 441 : 11.8
2026 (ಜನವರಿ-ಮಾರ್ಚ್) – 1026 110 10.7
ಸಿಎಂ ತವರಲ್ಲೇ ನವಜಾತ ಶಿಶುಗಳ ಮರಣ ಏರಿಕೆಯಾಗಿರುವುದು ಆತಂಕ ಉಂಟುಮಾಡಿದೆ. ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿದ್ದು, ತಾಯಿ-ಮಕ್ಕಳ ಆರೋಗ್ಯ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.” – ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು-ಕೊಡಗು ಸಂಸದ. -ಡಾ. ಕೆ.ಆರ್.ದ್ರಾಕ್ಷಾಯಿಣಿ, ಡೀನ್ ಮತ್ತು ನಿರ್ದೇಶಕಿ, ಮೈಸೂರು ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆ.., ಗಂಭೀರ ಸ್ವರೂಪದ ಪ್ರಕರಣಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇಲ್ಲ. ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ.
















