IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 67ನೇ ಪಂದ್ಯವು ಕೇವಲ ರನ್ ಮಳೆಯ ಕಾರಣಕ್ಕಷ್ಟೇ ಅಲ್ಲ, ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿಯಿಂದಲೂ ಜಾಗತಿಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಮೈದಾನದಲ್ಲಿ ಇಬ್ಬರು ಆಟಗಾರರ ನಡುವೆ ನಡೆದ ಘಟನೆಗಳು ಹಾಗೂ ಪಂದ್ಯ ಅಂತ್ಯವಾದ ಬಳಿಕ ವಿರಾಟ್ ಕೊಹ್ಲಿ ತೋರಿದ ವರ್ತನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸನ್ರೈಸರ್ಸ್ ಹೈದರಾಬಾದ್ ಇನಿಂಗ್ಸ್ ವೇಳೆ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಎಸೆದ ಯಾರ್ಕರ್ ಬಾಲ್ಗೆ ಕ್ಲೀನ್ ಬೌಲ್ಡ್ ಆದರು. ಹೆಡ್ ಔಟಾದ ಕ್ಷಣದಲ್ಲಿ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ ಭಾರೀ ಆಕ್ರಮಣಕಾರಿ ರೀತಿಯಲ್ಲಿ ಸಂಭ್ರಮಿಸಿದ್ದು, ಈ ದೃಶ್ಯ ಅಭಿಮಾನಿಗಳ ಗಮನ ಸೆಳೆಯಿತು.
ಇದಾದ ಬಳಿಕ ಆರ್ಸಿಬಿ ಬ್ಯಾಟಿಂಗ್ ಸಂದರ್ಭದಲ್ಲಿ ವೆಂಕಟೇಶ್ ಅಯ್ಯರ್, ಶಿವಾಂಗ್ ಕುಮಾರ್ ಓವರ್ ನಲ್ಲಿ ಸತತ ಬೌಂಡರಿ ಬಾರಿಸಿ 23 ರನ್ ಕಲೆಹಾಕಿದರು. ಈ ವೇಳೆ ನಾನ್ ಸ್ಟ್ರೈಕರ್ ಎಂಡ್ ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ, ಮಿಡ್ ವಿಕೆಟ್ ಭಾಗದಲ್ಲಿದ್ದ ಟ್ರಾವಿಸ್ ಹೆಡ್ ಕಡೆಗೆ ತಮಾಷೆಯ ಶೈಲಿಯಲ್ಲಿ “ಬಾ ಇಲ್ಲಿ, ನೀನೇ ಆಫ್ ಸ್ಪಿನ್ ಬೌಲಿಂಗ್ ಮಾಡು” ಎಂದು ಸವಾಲು ಹಾಕಿದರು.ಕೊಹ್ಲಿ ಸವಾಲು ಹಾಕಿದ ಕೆಲವೇ ಹೊತ್ತಿನಲ್ಲಿ ಸಾಕಿಬ್ ಹುಸೇನ್ ಎಸೆತದಲ್ಲಿ ವಿರಾಟ್ ಕೊಹ್ಲಿ ಕೇವಲ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊಹ್ಲಿ ಪೆವಿಲಿಯನ್ ಕಡೆಗೆ ತೆರಳುತ್ತಿದ್ದಾಗ ಟ್ರಾವಿಸ್ ಹೆಡ್ ಕೂಡ ತಿರುಗೇಟು ನೀಡಿದರು. “ನಾನು ಬೌಲಿಂಗ್ ಮಾಡಲು ಬರುವ ಮುನ್ನವೇ ನೀನು ಔಟಾದೆ” ಎಂದು ಹೆಡ್ ಪ್ರತಿಕ್ರಿಯಿಸಿದರೆಂದು ವರದಿಯಾಗಿದೆ. ಈ ಘಟನೆ ಬಳಿಕ ಕೊಹ್ಲಿ ಅಸಮಾಧಾನಗೊಂಡಂತೆ ಕಂಡುಬಂದರು.
ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 55 ರನ್ ಗಳ ಭರ್ಜರಿ ಜಯ ದಾಖಲಿಸಿದ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುತ್ತಿದ್ದರು. ಇದೇ ವೇಳೆ ಟ್ರಾವಿಸ್ ಹೆಡ್ ವಿರಾಟ್ ಕೊಹ್ಲಿ ಕಡೆಗೆ ಕೈ ಚಾಚಿದರೂ, ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡದೇ ನೇರವಾಗಿ ಮುಂದೆ ನಡೆದರು ಎನ್ನಲಾಗಿದೆ.ಆದರೆ ನಂತರ ಎಸ್ಆರ್ಎಚ್ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಅಭಿಷೇಕ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಆತ್ಮೀಯವಾಗಿ ಹಸ್ತಲಾಘವ ಮಾಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕ್ರಿಕೆಟ್ ನಲ್ಲಿ ಪಂದ್ಯ ಮುಗಿದ ಬಳಿಕ ಪರಸ್ಪರ ಹಸ್ತಲಾಘವ ಮಾಡುವುದು ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೈದಾನದಲ್ಲಿ ನಡೆದ ಉದ್ವಿಗ್ನತೆ ಪಂದ್ಯ ಅಂತ್ಯದೊಂದಿಗೆ ಮುಗಿಯಬೇಕು ಎಂಬುದು ಕ್ರೀಡಾ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಆದರೆ ಟ್ರಾವಿಸ್ ಹೆಡ್ ಜೊತೆ ಹಸ್ತಲಾಘವ ಮಾಡದ ವಿರಾಟ್ ಕೊಹ್ಲಿ ನಡೆ ಇದೀಗ ಕ್ರೀಡಾ ಸ್ಫೂರ್ತಿ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಈ ಘಟನೆ ನಡುವೆ 2023ರ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯವೂ ಮತ್ತೆ ಚರ್ಚೆಗೆ ಬಂದಿದೆ. ಆ ವೇಳೆ ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ ಜೊತೆ ವಿರಾಟ್ ಕೊಹ್ಲಿ ಮೈದಾನದಲ್ಲೇ ವಾಗ್ವಾದ ನಡೆಸಿದ್ದರು. ಪಂದ್ಯ ಬಳಿಕ ಕೊಹ್ಲಿ ನೀಡಿದ್ದ ಹೇಳಿಕೆ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 255 ರನ್ ಗಳ ಭಾರೀ ಮೊತ್ತ ದಾಖಲಿಸಿತು. ಈ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಎಸ್ಆರ್ಎಚ್ ತಂಡ 55 ರನ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

















