ಮನೆ ರಾಜಕೀಯ ಅಂತರರಾಜ್ಯ ಜಲ ವಿವಾದ ಕುರಿತು ವರ್ಚುಯಲ್ ಸಮ್ಮೇಳನ: ಸ್ಪಷ್ಟ ನಿಲುವು ತಳೆಯಲು ಸಹಕಾರಿ: ...

ಅಂತರರಾಜ್ಯ ಜಲ ವಿವಾದ ಕುರಿತು ವರ್ಚುಯಲ್ ಸಮ್ಮೇಳನ: ಸ್ಪಷ್ಟ ನಿಲುವು ತಳೆಯಲು ಸಹಕಾರಿ: ಬಸವರಾಜ ಬೊಮ್ಮಾಯಿ

0

ಬೆಂಗಳೂರು: ಕೃಷ್ಣ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ಸಮಸ್ಯೆಗಳು ಹಾಗೂ ನ್ಯಾಯಾಲಯದ ವಿಚಾರಗಳಿಗೆ ಸಂಬಂಧಿಸಿದ ಅಂತರರಾಜ್ಯ ಜಲ ವಿವಾದ ಕುರಿತು ವರ್ಚುಯಲ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದು, ರಾಜ್ಯ ಸ್ಪಷ್ಟ ನಿಲುವು ತಳೆಯಲು ಸಭೆ  ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ದೆಹಲಿಯಿಂದ ರಾಜ್ಯವನ್ನು  ಪ್ರತಿನಿಧಿಸುವ ಹಿರಿಯ ನ್ಯಾಯವಾದಿಗಳು, ಎ. ಜಿ ಹಾಗೂ ನೀರಾವರಿ ತಾಂತ್ರಿಕ ತಜ್ಞರು ಸಭೆಯಲ್ಲಿ  ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ನೀರಾವರಿ ವಿಚಾರದಲ್ಲಿ ಮಧ್ಯಸ್ಥರದ ರಾಜ್ಯವಾಗಿದೆ. ನಮ್ಮ ಮೇಲೆ ಹಾಗೂ ಕೆಳಗಿರುವ ರಾಜ್ಯಗಳು ಆಗಾಗ್ಗೆ ವ್ಯಾಜ್ಯಗಳನ್ನು ಹೂಡುತ್ತಾರೆ.  ಟ್ರಿಬ್ಯುನಲ್ ಆದೇಶಗಳು  ಈಗಾಗಲೇ ಬಂದಿದೆ.

ಕೃಷ್ಣ ನದಿಗೆ  ಸಂಬಂಧಿಸಿದ  ಬಚಾವತ್ ಆದೇಶ ಹಾಗೂ ಬ್ರಿಜೇಶ್ ಮಿಶ್ರಾ ಆದೇಶವೂ ಬಂದಿದ್ದು, ಅಧಿಸೂಚನೆ ಹೊರಡಿಸಬೇಕಿದೆ. ಮಹದಾಯಿ  ಟ್ರಿಬ್ಯುನಲ್ ಆದೇಶ ಬಂದರೂ ಸಹ ಪುನಃ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವಿದೆ. ಕರ್ನಾಟಕವೂ ಸೇರಿದಂತೆ ಮೂರೂ ರಾಜ್ಯಗಳು ಹಂಚಿಕೆಯಾಗಿರುವ ನೀರಿನ ಬಗ್ಗೆ ತಮ್ಮ ತಕರಾರುಗಳನ್ನು ಸರ್ವೋಚ್ಚ ನ್ಯಾಯಾಲಯದ ಮುಂದಿಟ್ಟಿವೆ. ಕಾವೇರಿ ಜಲಾನಯನ  ಪ್ರದೇಶದಲ್ಲಿ ಟ್ರಿಬ್ಯು ನಲ್ ಆದೇಶವಾಗಿ ಅಧಿಸೂಚನೆ ಆದರೂ ಕೂಡ ಮೇಕೆದಾಟು ಒಳಗೊಂಡಂತೆ ತಮಿಳುನಾಡು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ. ಇವೆಲ್ಲವುಗಳ ಬಗ್ಗೆ ಈಗಾಗಲೇ ಸಭೆಗಳಾಗಿದ್ದು, ಇಂದು ವರ್ಚುಯಲ್ ಸಭೆ ನಡೆಯಲಿದೆ. ಆದಷ್ಟು ಶೀಘ್ರವಾಗಿ ಸಮಸ್ಯೆಗಳ ಪರಿಹಾರಕ್ಕೆ ಗಂಭೀರವಾಗಿ ಪ್ರಯತ್ನ ಗಳನ್ನು ಮಾಡಲಾಗುವುದು. ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಿ ಸ್ಪಷ್ಟವಾದ ನಿಲುವನ್ನು  ತೆಗೆದುಕೊಳ್ಳಲಾಗುವುದು ಎಂದರು.

ಹಿಂದಿನ ಲೇಖನಅಗ್ನಿ ಅವಘಡ: 7 ಮಂದಿ ದುರ್ಮರಣ, 17ಕ್ಕೂ ಹೆಚ್ಚು ಮಂದಿಗೆ ಗಾಯ
ಮುಂದಿನ ಲೇಖನಫೆಬ್ರವರಿ 24ಕ್ಕೆ ‘ವಿಕ್ರಾಂತ್ ರೋಣ’ ತೆರೆಗೆ