ಮನೆ ರಾಜ್ಯ ಇಂದು ದೊಡ್ಡಗೌಡರ ಹುಟ್ಟುಹಬ್ಬಕ್ಕೆ ಗಣ್ಯರಿಂದ ಶುಭಹಾರೈಕೆ..!

ಇಂದು ದೊಡ್ಡಗೌಡರ ಹುಟ್ಟುಹಬ್ಬಕ್ಕೆ ಗಣ್ಯರಿಂದ ಶುಭಹಾರೈಕೆ..!

0

ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಂದು 94ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್‌ಡಿಸಿ ಪುತ್ರರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ – ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸ್’ಖಾತೆಯಲ್ಲಿ ಹೆಚ್.ಡಿ ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಹೆಚ್.ಡಿ ದೇವೇಗೌಡ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸಾರ್ವಜನಿಕ ಜೀವನದಲ್ಲಿ ತಮ್ಮ ದೀರ್ಘಕಾಲದ ಸೇವೆಯ ಮೂಲಕ ಅವರು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನೀತಿ ಸಂಬಂಧಿತ ವಿಷಯಗಳ ಬಗ್ಗೆ ಅವರ ಆಳವಾದ ಅರಿವು ಮತ್ತು ಹಿಂದುಳಿದವರ ಸೇವೆಯ ಮೇಲಿನ ಬದ್ಧತೆ ಎಲ್ಲರಿಗೂ ಪರಿಚಿತವಾಗಿದೆ. ಅವರು ದೀರ್ಘಾಯುಷಿ ಹಾಗೂ ಆರೋಗ್ಯವಂತರಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ವಿಶೇಷವಾಗಿ ಶುಭಹಾರೈಸಿದ್ದಾರೆ.

ಹುಟ್ಟುಹಬ್ಬದ ಅಂಗವಾಗಿ ದೇವೇಗೌಡರು, ಬೆಳ್ಳಂಬೆಳಗ್ಗೆಯೇ ಜೆ.ಪಿ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ದೇವೆಗೌಡರ ಮೊಮ್ಮಕ್ಕಳು ಅವರಿಗೆ ಪ್ರೀತಿಯ ಅಪ್ಪುಗೆ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. 11 ಘಂಟೆ ನಂತರ ಅವರು ಸಾರ್ವಜನಿಕರು ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ಬೆಳಗ್ಗೆ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿದ್ದೇನೆ. ಕಳೆದ ಐದು ವರ್ಷಗಳಿಂದ ಪ್ರತಿ ಮಂಗಳವಾರ ನನ್ನ ಆರೋಗ್ಯಕ್ಕಾಗಿಯೇ ಪೂಜೆ ಮಾಡುತ್ತಾರೆ. ಡಯಾಲಿಸಿಸ್ ಇದ್ದ ಕಾರಣ ತಿರುಪತಿಗೆ ಹೋಗಲು ಆಗಲಿಲ್ಲ. ಹೀಗಾಗಿ ಇಲ್ಲೇ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ನನ್ನ ಕೈಲಾದ ಮಟ್ಟಿಗೆ ರಾಜ್ಯದ ಜನತೆಗೆ ಕೆಲಸ ಮಾಡುತ್ತೇನೆ. ಇನ್ನೂ ಕೆಲವು ದಿನ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವ ದೃಢ ಸಂಕಲ್ಪ ಮಾಡಿದ್ದೇನೆ. ನನಗೆ 93 ಆಯಿತು ಅಂತ ಮನೆಯಲ್ಲಿ ಕೂತುಕೊಳ್ಳುವುದಿಲ್ಲ. ವ್ಹೀಲ್‌ಚೇರ್‌ನಲ್ಲೇ ಓಡಾಡುತ್ತೇನೆ. ಜನರ ಸಮಸ್ಯೆಗಳು ತುಂಬಾ ಹದಗೆಟ್ಟಿವೆ. ಮೇ 20 ರಂದು ಮತ್ತೆ ಸುದ್ದಿಗೋಷ್ಠಿ ನಡೆಸಿ ರಾಜ್ಯ ಹಾಗೂ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ ಎಂದರು. ಪ್ರಧಾನಿ ಮೋದಿ ಸಂದೇಶ ಕಳುಹಿಸಿದ್ದು, ಅಮಿತ್ ಶಾ ವೈಯಕ್ತಿಕವಾಗಿ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿಗಳು ಸ್ವೀಡನ್‌ನಿಂದ ಒಳ್ಳೆಯ ಸಂದೇಶ ಕಳಿಸಿದ್ದಾರೆ. ಅನೇಕ ಸ್ನೇಹಿತರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಬಿ.ಎಸ್.ಯಡಿಯೂರಪ್ಪ ಕೂಡ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ ಎಂದರು.

ಹೆಚ್.ಡಿ ಕುಮಾರಸ್ವಾಮಿ – ಹೆಚ್.ಡಿ ಕುಮಾರಸ್ವಾಮಿ ಅವರು ತಂದೆಯೊಂದಿಗಿನ ಪೋಟೋ ಹಂಚಿಕೊಂಡು, ನನ್ನ ಪೂಜ್ಯ ತಂದೆಯವರು, ರಾಷ್ಟ್ರದ ಗೌರವಾನ್ವಿತ ಮಾಜಿ ಪ್ರಧಾನಮಂತ್ರಿಗಳು ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶ್ರೀ ಹೆಚ್.ಡಿ ದೇವೇಗೌಡ ಅವರಿಗೆ ಭಕ್ತಿಪೂರ್ವಕವಾಗಿ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ. ಹೋರಾಟ, ಸಂಘರ್ಷ, ತ್ಯಾಗ. ಸಮರ್ಪಣಾ ಭಾವದಿಂದ ರಾಜಕೀಯದ ಉತ್ತುಂಗಕ್ಕೆ ಏರಿದ ಮಣ್ಣಿನಮಗನ ಹೆಜ್ಜೆಗಳು ಅನುಕರಣೀಯ. ಅವರು ತಮ್ಮ ಬದುಕಿನ ಪ್ರತೀಕ್ಷಣವನ್ನು ಜನಸೇವೆಗೆ ಮೀಸಲಿಟ್ಟರು. 94ರ ಈ ವಯಸ್ಸಿನಲ್ಲಿಯೂ ಜನಹಿತಕ್ಕಾಗಿ ಸಂಘರ್ಷದ ಹಾದಿಯನ್ನು ಸವೆಸುತ್ತಿದ್ದಾರೆ. ಅವರ ದಾರಿ ತಲೆತಲೆಮಾರಿಗೂ ಮಾದರಿ. ಆ ಹಿರಿಯ ಜೀವಕ್ಕೆ ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಸುದೀರ್ಘ ಕಾಲ ರಾಷ್ಟ್ರಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಸಿಎಂ ಸಿದ್ದರಾಮಯ್ಯ – ಸಿದ್ದರಾಮಯ್ಯ ಅವರು ಕೂಡ ಪೋಸ್ಟ್ ನಲ್ಲಿ, ಮಾಜಿ ಪ್ರಧಾನಿಗಳು, ಹಿರಿಯ ರಾಜಕೀಯ ನಾಯಕರು ಆಗಿರುವ ಹೆಚ್.ಡಿ.ದೇವೇಗೌಡರಿಗೆ ಜನ್ಮದಿನದ ಶುಭಾಶಯಗಳು. ನಾಡಿನ ಜನರ ಸೇವೆಯನ್ನು ಇನ್ನಷ್ಟು ಕಾಲ ನಡೆಸುವಂತೆ ಭಗವಂತ ನಿಮಗೆ ಆಯುರಾರೋಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.

ಆರ್.ಅಶೋಕ್ – ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡ ವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಸುಧೀರ್ಘ ರಾಜಕೀಯ ಅನುಭವ, ಹೋರಾಟಗಳು ಮತ್ತು ಕ್ರಿಯಾಶೀಲತೆ ಎಲ್ಲರಿಗೂ ಮಾದರಿಯಾಗಿದೆ. ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ನಾಡಿನ ಅಭಿವೃದ್ಧಿಗೆ ಅತ್ಯಮೂಲ್ಯ ಮಾರ್ಗದರ್ಶನ ನೀಡುತ್ತಿರುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.

ಬಿ.ವೈ ವಿಜಯೇಂದ್ರ – ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ಶುಭಕೋರಿ, ಹಿರಿಯ ರಾಜಕೀಯ ಧುರೀಣ, ಭಾರತದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಮುತ್ಸದ್ದಿ ನಾಯಕರಾಗಿರುವ ಸನ್ಮಾನ್ಯ ಶ್ರೀ ಹೆಚ್.ಡಿ ದೇವೇಗೌಡ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.ನಾಡಿನ ಜ್ವಲಂತ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಡುತ್ತಾ, ನಾಡಿನ ಅಭಿವೃದ್ಧಿಗೆ ನಿಮ್ಮ ಕಾಳಜಿ, ಜನಸೇವೆಗೆ ನಿಮ್ಮ ಬದ್ಧತೆ ಆದರ್ಶಪ್ರಾಯವಾಗಿದೆ. ಭಗವಂತನು ನಿಮಗೆ ದೀರ್ಘಾಯುಷ್ಯವನ್ನು, ಉತ್ತಮ ಆರೋಗ್ಯವನ್ನು ಕರುಣಿಸಲಿ, ನಾಡಿಗೆ ನಿಮ್ಮ ಮಾರ್ಗದರ್ಶನ ಹೀಗೆಯೇ ಮುಂದುವರಿಯುವಂತೆ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.