ಮನೆ ರಾಜ್ಯ ಗೃಹಲಕ್ಷ್ಮಿ ಯೋಜನೆ ಹಣ, ಕೂಡಿಟ್ಟು ಐಸ್‌ಕ್ರೀಮ್ ಅಂಗಡಿ ತೆರೆದ ಮಹಿಳೆ

ಗೃಹಲಕ್ಷ್ಮಿ ಯೋಜನೆ ಹಣ, ಕೂಡಿಟ್ಟು ಐಸ್‌ಕ್ರೀಮ್ ಅಂಗಡಿ ತೆರೆದ ಮಹಿಳೆ

0

ಬಳ್ಳಾರಿ : ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ಸಣ್ಣದಾಗಿ ಐಸ್‌ಕ್ರೀಮ್ ಅಂಗಡಿ ತೆರೆದು ಬದುಕು ಕಟ್ಟಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಹರಾಳು ಗ್ರಾಮದ ಎನ್.ವಿಶಾಲಾಕ್ಷಿ ಐಸ್‌ಕ್ರೀಮ್ ಅಂಗಡಿ ತೆರೆದು, ಸ್ವಾವಲಂಬಿ ಬದುಕು ಕಟ್ಟಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಧ್ಯಮ ವರ್ಗದ ಕುಟುಂಬದ ವಿಶಾಲಾಕ್ಷಿ ನಿತ್ಯ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ, ಪ್ರತಿ ತಿಂಗಳು 2,000 ರೂ.ನಂತೆ ಬರುವ ಗೃಹಲಕ್ಷ್ಮೀ ಹಣ ಕೂಡಿಟ್ಟು ಐಸ್‌ಕ್ರೀಂ ಅಂಗಡಿ ಓಪನ್ ಮಾಡಿದ್ದಾರೆ. ಕೊಟ್ಟೂರಿನ ಕಿಶನ್ ಎಂಟರ್ಪ್ರೈಸ್ ವಿತರಕರಿಂದ ಚಾಕೋಬಾರ್, ಐಸ್‌ ಕ್ಯಾಂಡಿ, ಕುಲ್ಫಿ ಐಸ್, ಕೋನ್ ಐಸ್, ಕಪ್ ಐಸ್ ಇನ್ನಿತರೆ ಎಲ್ಲಾ ತರಹದ ಐಸ್‌ಕ್ರೀಮ್ ಉತ್ಪನ್ನಗಳನ್ನು ನೇರವಾಗಿ ಪಡೆದು ಮಾರಾಟ ಮಾಡುತ್ತಿದ್ದಾರೆ. ಹೊಸದಾಗಿ ಅಂಗಡಿ ಆರಂಭಿಸಿರುವ ವಿಶಾಲಾಕ್ಷಿಯ ಅಂಗಡಿಗೆ ಗ್ರಾಹಕರು ಲಗ್ಗೆ ಇಟ್ಟು ಐಸ್‌ಕ್ರೀಂ ಖರೀದಿ ಮಾಡ್ತಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಬಿಸಿಲಿನ ತಾಪಮಾನ ವಿಪರೀತವಾಗಿದೆ. ಬಿಸಿಲಿಗೆ ತತ್ತರಿಸಿರುವ ಜನರು, ಐಸ್‌ಕ್ರೀಂ ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ‌. ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ಐಸ್‌ಕ್ರೀಂ ಅಂಗಡಿ ಆರಂಭಿಸಿರುವ ವಿಶಾಲಾಕ್ಷಿ ಅವರು ತಂಪುಪಾನೀಯಗಳನ್ನೂ ಇಟ್ಟುರುವುದರಿಂದ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲರೂ ಖರೀದಿಗೆ ಮುಂದಾಗುತ್ತಿದ್ದಾರೆ.

ಇದುವರೆಗೂ ಬಿಡುಗಡೆಯಾದ ಕಂತುಗಳ ಹಣವನ್ನು ಬ್ಯಾಂಕ್ ಖಾತೆಯಲ್ಲೇ ಉಳಿಸಿದ್ದ ವಿಶಾಲಾಕ್ಷಿ ಅವರು ತಮ್ಮ ಪತಿ ಎನ್.ಬಸವರಾಜ ಅವರ ಸಹಕಾರದೊಂದಿಗೆ ಈ ಉದ್ಯಮವನ್ನು ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಉಚಿತ ಭಾಗ್ಯವು ನಮ್ಮ ಬದುಕಿಗೆ ವರದಾನವಾಗಿದೆ. ಯೋಜನೆ ಜಾರಿಗೆ ತಂದವರ ಹೊಟ್ಟೆ ನೂರಾರು ಕಾಲ ತಣ್ಣಗಿರಲಿ ಎಂದ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಮೂಲಕ ಗೃಹಲಕ್ಷ್ಮೀ ಯೋಜನೆಯ ಹೆಸರಿನಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಂಡವರ ಸಾಲಿಗೆ ವಿಶಾಲಕ್ಷಿ ಅವರೂ ಸೇರಿರೋದು ವಿಶೇಷವಾಗಿದೆ.