ಮನೆ ಮನರಂಜನೆ ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

0

ಯುವ ರಾಜಕುಮಾರ್‌ ಅವರ ಹೊಸ ಸಿನಿಮಾ “ಎಕ್ಕ’ ಕೆಲ ದಿನಗಳ ಹಿಂದೆ ಘೋಷಣೆಯಾಗಿತ್ತು. ಈಗ ಚಿತ್ರದ ಪ್ರಿ ಪ್ರೊಡಕ್ಷನ್‌ ಕೆಲಸಗಳು ಮುಗಿದು, ಶೂಟಿಂಗ್‌ ಆರಂಭವಾಗಿದೆ. ಇತ್ತೀಚೆಗೆ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು.

Join Our Whatsapp Group

ಚಿತ್ರದ ಮೊದಲ ಶಾಟ್‌ನ್ನು ಡಾಲಿ ಧನಂಜಯ್‌ ನಿರ್ದೇಶನ ಮಾಡಿದರು. ಪಿಆರ್‌ಕೆ ಪ್ರೊಡಕ್ಷನ್ಸ್‌, ಜಯಣ್ಣ ಫಿಲಂಸ್‌ ಹಾಗೂ ಕೆಆರ್‌ಜಿ ಸ್ಟುಡಿಯೋಸ್‌ ಸಹಯೋಗದಲ್ಲಿ ಮೂಡಿಬರುತ್ತಿರುವ ಎಕ್ಕ ಚಿತ್ರಕ್ಕೆ ರೋಹಿತ್‌ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಈ ಸಂದರ್ಭದಲ್ಲಿ ರೋಹಿತ್‌ ಮಾತನಾಡಿ, “ಎಕ್ಕ ಒಬ್ಬ ಯುವಕನ ಕಥೆ ಹೇಳುತ್ತದೆ. ಒಬ್ಬ ಮನುಷ್ಯ ಭೂಗತ ಲೋಕಕ್ಕೆ ತುತ್ತಾದಾಗ, ಆತನಿಗೆ ಆಗುವ ಅನುಭವಗಳನ್ನು ಇಲ್ಲಿ ಹೇಳಲಾಗಿದೆ. ಕಾಶ್ಮೀರ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿ ಹಲವೆಡೆ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ. ಜನರ ಮೇಲೆ ಆಳವಾದ ಭಾವನಾತ್ಮಕ ಪ್ರಭಾವ ಬೀರುವ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿ’ ಎಂದರು.

ಚಿತ್ರದ ನಾಯಕ ನಟ ಯುವ ರಾಜಕುಮಾರ್‌ “ತಾಯಿ ಹಾಗೂ ಅಪ್ಪು ಚಿಕ್ಕಪ್ಪನ ಆಶೀರ್ವಾದದೊಂದಿಗೆ ಎಕ್ಕ ಚಿತ್ರ ಆರಂಭಿಸಿದ್ದೇವೆ. ಮೂರು ಹೆಸರಾಂತ ನಿರ್ಮಾಣ ಸಂಸ್ಥೆಗಳು, ರೋಹಿತ್‌ ಪದಕಿ ಅವರೊಡನೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ’ ಎಂದರು.

ಎಕ್ಕ ಸಿನಿಮಾಗೆ ಸಂಪದಾ ನಾಯಕ ನಟಿ, ಉಳಿದಂತೆ ಅತುಲ್‌ ಕುಲಕರ್ಣಿ, ಶೃತಿ ಕೃಷ್ಣ, ರಾಹುಲ್‌ ದೇವ್‌ ಶೆಟ್ಟಿ ಮತ್ತಿತರರು ನಟಿಸಲಿದ್ದಾರೆ. ರೋಹಿತ್‌ ಪದಕಿ ಹಾಗೂ ವಿಕ್ರಮ್‌ ಹತ್ವಾರ್‌ ಚಿತ್ರಕಥೆ ಬರೆದಿದ್ದಾರೆ. ಚರಣ್‌ ರಾಜ್‌ ಸಂಗೀತ ಸಂಯೋಜನೆ, ವಿ. ನಾಗೇಂದ್ರ ಪ್ರಸಾದ್‌, ಡಾಲಿ ಧನಂಜಯ್‌, ನಾಗಾರ್ಜುನ ಶರ್ಮ ಅವರ ಸಾಹಿತ್ಯ, ಸತ್ಯ ಹೆಗ್ಡೆ ಛಾಯಾಗ್ರಹಣ, ದೀಪು ಎಸ್‌. ಕುಮಾರ್‌ ಅವರ ಸಂಕಲನ ಚಿತ್ರಕ್ಕಿದೆ. 2025 ಜೂನ್‌ 6ರಂದು ಎಕ್ಕ ಸಿನಿಮಾ ತೆರೆಗೆ ಬರುವುದಾಗಿ ಚಿತ್ರತಂಡ ತಿಳಿಸಿದೆ.