ಮನೆ ರಾಜ್ಯ ಕಾಂಗ್ರೆಸ್, ಜೆಡಿಎಸ್‌ ಗೆ ಆಫರ್ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

ಕಾಂಗ್ರೆಸ್, ಜೆಡಿಎಸ್‌ ಗೆ ಆಫರ್ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

0

ಮೈಸೂರು(Mysuru): ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಬೇಕಾದಷ್ಟು ಮತಗಳು ನಮ್ಮ ಬಳಿ ಇವೆ. ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ನಾವು ಯಾವುದೇ ಆಫರ್ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.

ಮುಖ್ಯಮಂತ್ರಿ ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ‌ಬುಧವಾರ ಮಾತನಾಡಿದ ಅವರು, ಯಾವ ಪಕ್ಷದವರೂ ನಮಗೆ ಆಫರ್ ಕೊಟ್ಟಿಲ್ಲ. ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಕ್ರಿಯಿಸಿದರು.

ಶೀಘ್ರದಲ್ಲಿ ಲೋಕಾಯುಕ್ತರ ನೇಮಕ:

ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಘೋಷಿಸಲಾಗುವುದು. ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿ ಹೈಕೋರ್ಟ್ ‌ನೀಡಿರುವ ಸೂಚನೆಯಂತೆ ಕ್ರಮ ವಹಿಸಲಾಗಿದೆ ಎಂದರು.

ಮೇಕೆದಾಟು ಯೋಜನೆ: ಪ್ರಾಧಿಕಾರದ ತೀರ್ಪು ಅಂತಿಮ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾವೇರಿ ನೀರಾವರಿ ಪ್ರಾಧಿಕಾರದ ತೀರ್ಪು ಅಂತಿಮವಾಗಿದೆ.‌ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಪ್ರಾಧಿಕಾರ ರಚನೆ ಆಗಿರುವುದರಿಂದ ಮಧ್ಯಪ್ರವೇಶ ಮಾಡಲಾಗದು. ಏನೇ ನಿರ್ಧಾರವಿದ್ದರೂ ಪ್ರಾಧಿಕಾರವೇ ಮಾಡುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.‌ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ ಇದ್ದರು.