ಮನೆ ಸುದ್ದಿ ಜಾಲ ಬಿಗ್‌ ಡೀಲ್‌ ಸಕ್ಸಸ್‌ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್‌...

ಬಿಗ್‌ ಡೀಲ್‌ ಸಕ್ಸಸ್‌ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್‌ ಸಹಿ..!

0

ವಾಷಿಂಗ್ಟನ್‌ : ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕೊನೆಗೂ ಸಕ್ಸಸ್‌ ಕಂಡಿದೆ. ರಷ್ಯಾ ತೈಲ ಖರೀದಿ ಹಿನ್ನೆಲೆ ಭಾರತದ ಆಮದು ಸರಕುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ 25% ಸುಂಕ ಕಡಿತಗೊಳಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ.

ಅಮೆರಿಕ ಮತ್ತು ಭಾರತದ ನಡುವೆ 500 ಶತಕೋಟಿ ಡಾಲರ್‌ ಒಪ್ಪಂದವಾಗಿದ್ದು, ಈ ಹಿನ್ನೆಲೆ ಭಾರತದ ಮೇಲಿನ ಮೂಲ ಸುಂಕವನ್ನು 25% ನಿಂದ 15%ಗೆ ಇಳಿಕೆ ಮಾಡಲಾಗಿತ್ತು. ಇದೀಗ ರಷ್ಯಾ ತೈಲ ಖರೀದಿ ವಿರೋಧಿಸಿ ಹೇರಿದ್ದ 25% ಹೆಚ್ಚುವರಿ ಆಮದು ಸುಂಕವನ್ನೂ ತೆಗೆದುಹಾಕಿದ್ದಾರೆ. ಈ ಮೂಲಕ ಭಾರತದ ಜೊತೆಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಖರೀದಿ ಮಾಡುವುದನ್ನ ನಿಲ್ಲಿಸಲು ಭಾರತ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಶೇ. 25ರಷ್ಟು ದಂಡದ ರೂಪದ ಸುಂಕವನ್ನ ತೆಗೆದುಹಾಕಲಾಗಿದೆ ಎಂದು ಡೊನಾಲ್ಡ್‌ ಟ್ರಂಪ್‌ ಅವರು ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತವು ಅಮೆರಿಕದ ಇಂಧನ ಉತ್ಪನ್ನಗಳನ್ನ ಖರೀದಿಸುವುದಾಗಿಯೂ ಹೇಳಿದೆ.

ಅಲ್ಲದೇ ಮುಂದಿನ 10 ವರ್ಷಗಳಲ್ಲಿ ರಕ್ಷಣಾ ಸಹಕಾರವನ್ನ ವಿಸ್ತರಿಸಲು ಇತ್ತೀಚೆಗೆ ಅಮೆರಿಕದೊಂದಿಗೆ ಒಂದು ಚೌಕಟ್ಟಿಗೆ ಬದ್ಧವಾಗಿದೆ ಎಂದು ಇದೇ ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ಸರಕುಗಳ ಮೇಲಿನ ಹಾಗೂ ಅನೇಕ ಆಹಾರ ಧಾನ್ಯ, ಪದಾರ್ಥಗಳ ಮೇಲಿನ ಸುಂಕವನ್ನ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಫಂಡಿಂಗ್‌ ಮಾಡುತ್ತಿದೆ ಅನ್ನೋದು ಟ್ರಂಪ್‌ ಅವರ ಬಲವಾದ ಆರೋಪ ಆಗಿತ್ತು. ಅದಕ್ಕಾಗಿಯೇ ಮೊದಲು 25% ಸುಂಕ ವಿಧಿಸಿ, ನಂತರ 50% ಗೆ ಏರಿಸಿದ್ದರು ಟ್ರಂಪ್‌. ಇದೀಗ ಮೂಲ ಸುಂಕವನ್ನ 18%ಗೆ ಇಳಿಸಿದ್ದು, ಹೆಚ್ಚುವರಿ 25% ಸುಂಕವನ್ನ ತೆಗೆದುಹಾಕಿದ್ದಾರೆ. ಇತ್ತೀಚೆಗಷ್ಟೇ ಭಾರತದ ಆಮದಿನ ಮೇಲಿನ ಮೂಲ ಸುಂಕವನ್ನ 18%ಗೆ ಇಳಿಸಿರುವುದಾಗಿ ಟ್ರುತ್‌ ಸೋಷಿಯಲ್‌ ವೇದಿಕೆಯಲ್ಲಿ ತಿಳಿಸಿದ್ದ ಟ್ರಂಪ್‌ ಬೃಹತ್‌ ವ್ಯಾಪಾರ ಒಪ್ಪಂದವನ್ನೂ ಘೋಷಿಸಿದ್ದರು.

ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಿದೆ. ಪ್ರಧಾನಿ ಮೋದಿ ಕೂಡ ಒಪ್ಪಿಕೊಂಡಿದ್ದಾರೆ. ಭಾರತ ಇನ್ಮುಂದೆ ಅಮೆರಿಕ ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿ ಮಾಡಲಿದೆ. ಇದು ಉಕ್ರೇನ್‌ ವಿರುದ್ಧದ ಯುದ್ಧ ಕೊನೆಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಭಾರತದ ಮೇಲಿನ ಸುಂಕವನ್ನ 25% ನಿಂದ 18% ಗೆ ಇಳಿಕೆ ಮಾಡಿದೆ. ಜೊತೆಗೆ ಕೃಷಿ ಇಂಧನ, ಕಲ್ಲಿದ್ದಲು, ತಂತ್ರಜ್ಞಾನ ಸೇರಿದಂತೆ 500 ಶತಕೋಟಿ ಡಾಲರ್‌ ವ್ಯಾಪರಕ್ಕೆ ಒಪ್ಪಂದವಾಗಿದೆ. ಪ್ರತಿಯಾಗಿ ಭಾರತವು ಅಮೆರಿಕದ ಉತ್ಪನ್ನಗಳ ಮೇಲಿನ ತನ್ನ ಸುಂಕವನ್ನ ಶೂನ್ಯಕ್ಕೆ ಇಳಿಸುವ ನಿರೀಕ್ಷೆಯಿದೆ. ಜೊತೆಗೆ ಇತರ ಅಡೆತಡೆಗಳನ್ನೂ ನಿವಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.