ಮನೆ ಸುದ್ದಿ ಜಾಲ ‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್

‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್

0

ಬಣ್ಣದ ಬದುಕೇ ಹಾಗೇ, ಎಲ್ಲರನ್ನೂ ಅಟ್ರ್ಯಾಕ್ಟ್ ಮಾಡುತ್ತದೆ. ಆದರೆ, ಕೆಲವರನ್ನಷ್ಟೇ ಅಪ್ಪಿಕೊಳ್ಳುತ್ತದೆ. ಕನಸುಗಳ ಭುತ್ತಿ ಕಟ್ಟಿಕೊಂಡು ಸಾಕಷ್ಟು ಮಂದಿ ಸಿಲಿಕಾನ್ ಸಿಟಿಯ ಗಾಂಧಿನಗರಕ್ಕೆ ಕಾಲಿಡ್ತಾರೆ. ಆ ಸಾಲಿಗೆ ಈಗ ಯುವ ನಿರ್ಮಾಪಕ ಸಂತೋಷ್ ಕುಮಾರ್ ಸೇರ್ಪಡೆಯಾಗಿದ್ದಾರೆ.

ಬೆಂಗಳೂರು ಮೂಲದ ಸಂತೋಷ್ ಕುಮಾರ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೇ ಒಂದು ರೋಚಕ ಕಥೆ. ಸಿನಿಮಾ ಮಾಡಬೇಕು ಎಂದೂ ಯಾವುದೇ ಆಲೋಚನೆ ಇರದ ವ್ಯಕ್ತಿಗೆ ಬಣ್ಣದ ಲೋಕ ಸೆಳೆದಿದ್ದು ಹೇಗೆ ಎಂಬುದನ್ನು ‘ಸ್ಯಾಂಡಲ್‌ವುಡ್ ಟೈಮ್ಸ್’ ಜೊತೆ ಹಂಚಿಕೊಂಡಿದ್ದಾರೆ. ‘ಸುಖೀಭವ’ ಚಿತ್ರಕ್ಕೆ ನಿರ್ಮಾಪಕನಾಗಿರೋ ಇನ್‌ಸೈಡ್ ಕಹಾನಿ ಬಿಟ್ಟಿದ್ದಾರೆ.

ಲಂಡನ್‌ನಲ್ಲಿ ಎಂಬಿಎ ಮಾಡಿರೋ ಸಂತೋಷ್ ಕುಮಾರ್ ತದನಂತರ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಶಸ್ವಿಯಾದವರು. ಹೀಗಿರುವಾಗ ಈ ವೃತ್ತಿ ಮೂಲಕ ಅವರಿಗೆ ಪರಿಚಯವಾಗಿದ್ದೇ ‘ರಾಬರ್ಟ್’ ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಅಲ್ಲಿಂದ ಅವರೊಂದಿಗೆ ಸಂತೋಷ್‌ ಕುಮಾರ್‌ಗೆ ಉತ್ತಮ ಒಡನಾಟ ಶುರುವಾಯ್ತು. ಹೆಬ್ಬುಲಿ, ರಾಬರ್ಟ್, ಉಪಾಧ್ಯಕ್ಷ, ಮದಗಜ ಚಿತ್ರಗಳಿಂದ ಉಮಾಪತಿ ಸಕ್ಸಸ್ ಕಂಡು ಖುಷಿಪಟ್ಟರು. ಅವರನ್ನೇ ಸ್ಫೂತಿಯಾಗಿಟ್ಟುಕೊಂಡು ತಾವು ಕೂಡ ಸಿನಿಮಾ ಮಾಡಿ ಗೆಲ್ಲಬೇಕು ಎಂಬ ಮಹದಾಸೆಯಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಪ್ರಯೋಗ ಎಂಬಂತೆ ಡೈರೆಕ್ಟರ್ ರಾಜೇಶ್ ನಾಯ್ಡು ಜೊತೆಗೂಡಿ ‘ರೈಟ್ ಟರ್ನ್’ ಎಂಬ ಕಿರುಚಿತ್ರ ಮಾಡುತ್ತಾರೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಹೀಗಾಗಿ, ಈ ಚಿತ್ರದ ಹೀರೋ ಮಹೇಂದ್ರ, ಡೈರೆಕ್ಟರ್ ರಾಜೇಶ್ ಜೊತೆಯೀಗ ಹೊಸ ಚಿತ್ರ ‘ಸುಖೀಭವ’ಗೆ ಸಂತೋಷ್ ಕುಮಾರ್ ಕೈಜೋಡಿಸ್ತಾರೆ. ಆಗ ರಾಜೇಶ್ ಅವರು 3 ಬಗೆಯ ಕಥೆಗಳನ್ನು ಸಂತೋಷ್‌ ಕುಮಾರ್‌ಗೆ ಹೇಳ್ತಾರೆ. ಅದರಲ್ಲಿ ಫ್ಯಾಮಿಲಿ ಓರಿಯೇಟೆಡ್ ಸಿನಿಮಾಗೆ ಸಂತೋಷ್ ಗ್ರೀನ್ ಸಿಗ್ನಲ್ ಕೊಡುತ್ತಾರೆ.

ಈ ಕಥೆಗೆ ಶುರುವಿನಲ್ಲಿ ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’ ಎಂದು ಟೈಟಲ್ ಇಡಲಾಗಿತ್ತು. ಆದರೆ, ಆ ನಂತರ ಈ ಪ್ರಾಜೆಕ್ಟ್‌ಗೆ ‘ಸುಖೀಭವ’ ಟೈಟಲ್ ಸೂಕ್ತ ಎಂದೆನಿಸಿ ಇದನ್ನೇ ಫೈನಲ್ ಮಾಡಲಾಗುತ್ತದೆ. ಈ ಚಿತ್ರದ ಮುಹೂರ್ತ ಸಂದರ್ಭದಲ್ಲಿ ಉಮಾಪತಿ ಶ್ರೀನಿವಾಸ್, ರಾಮಲಿಂಗಾ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಚಿತ್ರತಂಡಕ್ಕೆ ಉಮಾಪತಿ ಕ್ಲ್ಯಾಪ್ ಮಾಡಿ ಶುಭಹಾರೈಸಿದ್ದರ ಬಗ್ಗೆ ಸಂತೋಷ್ ಕುಮಾರ್‌ ಮಾತನಾಡಿದ್ದಾರೆ.