ಚಿಕ್ಕಮಗಳೂರು : ನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಗ್ರಾಹಕರು ಇಟ್ಟಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಬ್ಯಾಂಕ್ ಸಿಬ್ಬಂದಿ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ.
ಬ್ಯಾಂಕಿನಲ್ಲಿ ಅಸಲಿ ಚಿನ್ನವಿಟ್ಟು ಸಾಲ ಪಡೆದಿದ್ದ, ಗ್ರಾಹಕರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್ ಮತ್ತು ಸಿಬ್ಬಂದಿ ನಾರಾಯಣಸ್ವಾಮಿ ಸೇರಿದಂತೆ ಐವರ ವಿರುದ್ಧ ವಂಚನೆಯ ಆರೋಪ ಕೇಳಿಬಂದಿದೆ. ಈ ಸಂಬಂಧ ಈಗಾಗಲೇ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 2020 ರಿಂದ 2025ರ ಅವಧಿಯಲ್ಲಿ ಈ ಬೃಹತ್ ಹಗರಣ ನಡೆದಿದೆ ಎಂದು ಹೇಳಲಾಗುತ್ತಿದೆ.
ಗ್ರಾಹಕರಿಗೆ ತಿಳಿಯದಂತೆ ಅವರ ಹೆಸರಿನಲ್ಲೇ ಹೆಚ್ಚುವರಿ ಗೋಲ್ಡ್ ಲೋನ್ ಮಾಡಿ ಹಣವನ್ನು ಗುಳುಂ ಮಾಡಲಾಗಿದೆ. ಗ್ರಾಹಕರು ಇಟ್ಟಿದ್ದ ಅಸಲಿ ಚಿನ್ನವನ್ನು ಮಾರಿ ಆ ಜಾಗದಲ್ಲಿ ನಕಲಿ ಚಿನ್ನವನ್ನು ಇಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. 80 ಗ್ರಾಂ ನಿಂದ ಹಿಡಿದು 140 ಗ್ರಾಂ ವರೆಗೂ ಚಿನ್ನವಿಟ್ಟು ಸಾಲ ಪಡೆದಿದ್ದ ಹಲವು ಗ್ರಾಹಕರು ಈಗ ಸಾಲ ಮರುಪಾವತಿ ಮಾಡಿದರೂ ತಮ್ಮ ಚಿನ್ನ ವಾಪಸ್ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇಷ್ಟೇ ಅಲ್ಲದೇ ಗ್ರಾಹಕರ ಎಫ್ಡಿ ಹಣವನ್ನೂ ಸಹ ಲೂಟಿ ಮಾಡಲಾಗಿದೆ.
ಸ್ಥಳೀಯವಾಗಿ ನ್ಯಾಯ ಸಿಗದ ಕಾರಣ, ವಂಚನೆಗೆ ಒಳಗಾದ ಸಂತ್ರಸ್ತರು ಬೆಂಗಳೂರಿನ ಕೇಂದ್ರ ಕಚೇರಿಯತ್ತ ಮುಖ ಮಾಡಿದ್ದಾರೆ. ಗ್ರಾಹಕರು ಕೇಂದ್ರ ಕಚೇರಿಯ ವ್ಯವಸ್ಥಾಪಕರ ಗಮನಕ್ಕೆ ಈ ವಿಚಾರ ತಂದಿದ್ದು, ಲಿಖಿತ ದೂರು ನೀಡಿದ್ದಾರೆ. ಹಣ ಕಟ್ಟಲು ತಯಾರಿದ್ದೇವೆ. ನಮ್ಮ ಚಿನ್ನವನ್ನು ನಮಗೆ ವಾಪಸ್ ಕೊಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.















