ನವದೆಹಲಿ : ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ 38ನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಎಲ್‌ಪಿಜಿ ಕೊರತೆ ಆತಂಕದಲ್ಲಿದ್ದ ಜನಕ್ಕೆ ಕೇಂದ್ರ ಸರ್ಕಾರ ಮತ್ತೆ ಅಭಯ ನೀಡಿದೆ. ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ ಎಂದಿರುವ ಕೇಂದ್ರ ಸರ್ಕಾರ ಮತ್ತೊಂದು ಕಡೆ ಕೊರತೆ ನೀಗಿಸಲು 5 ಕೆಜಿ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯನ್ನ ಹೆಚ್ಚಿಸಿದೆ.
ಭಾರತದಲ್ಲಿ ಎಲ್‌ಪಿಜಿ ಕೊರತೆಯಿಲ್ಲ, ಸಾಕಷ್ಟು ಲಭ್ಯವಿದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. 5 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ಗಳು ಎಲ್ಲ ಏಜೆನ್ಸಿಗಳಲ್ಲೂ ಲಭ್ಯವಿದೆ. ಸೂಕ್ತ ಗುರುತಿನ ಚೀಟಿ ತೋರಿಸಿ ಗ್ರಾಹಕರು ಸಿಲಿಂಡರ್ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
6.6 ಲಕ್ಷ ಸಿಲಿಂಡರ್ ಮಾರಾಟ – ಎಲ್‌ಪಿಜಿ ಬಿಕ್ಕಟ್ಟು ಪೂರೈಸಲು 5 ಕೆಜಿ ಸಿಲಿಂಡರ್ ಪೂರೈಕೆ ಹೆಚ್ಚಿಸಿದ ಬೆನ್ನಲ್ಲೇ ಇವುಗಳ ಖರೀದಿಗೂ ಜನ ಆಸಕ್ತಿ ತೋರಿದ್ದಾರೆ. ಕಳೆದ ಮಾರ್ಚ್ 23 ರಿಂದ ದೇಶದಲ್ಲಿ ಸುಮಾರು 6.6 ಲಕ್ಷ ಸಿಲಿಂಡರ್‌ಗಳು ಮಾರಾಟವಾಗಿದೆ. ಸದ್ಯ ಈ ಸಣ್ಣ ಸಿಲಿಂಡರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಜನ ಸೂಕ್ತ ದಾಖಲಾತಿ ನೀಡಿ ಗ್ಯಾಸ್ ಏಜೆನ್ಸಿಗಳಿಂದ ಖರೀದಿಸಬಹುದು ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ.
ಐಡಿ ಪ್ರೂಫ್ ಅಗತ್ಯ – 5 ಕೆಜಿ ಸಿಲಿಂಡರ್ ಖರೀದಿಸಲು ಯಾವುದೇ ವಾಸಸ್ಥಳದ ಸಾಕ್ಷ್ಯ ತೋರಿಸುವ ಅಗತ್ಯವಿಲ್ಲ. ಆದ್ರೆ ಯಾವುದಾದರೂ ಒಂದು ಗುರುತಿನ ಚೀಟಿ ಮಾತ್ರ ತೋರಿಸಿ, ಸಿಲಿಂಡರ್ ಖರೀದಿ ಮಾಡಬಹುದು ಎಂದು ಸರ್ಕಾರ ಎಚ್ಚರಿಸಿದೆ.
ಎಲ್ಲಾ ರೀತಿಯಲ್ಲೂ ಅಗತ್ಯ ಕ್ರಮ – ಮನೆಗಳಿಗೆ, ಸಾರಿಗೆ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಕಾರ್ಯಗಳಿಗೆ ಪೆಟ್ರೋಲ್, ಡೀಸೆಲ್, ಅನಿಲ ಪೂರೈಕೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ರಸಗೊಬ್ಬರ ಘಟಕಗಳಿಗೆ ಪೂರೈಕೆ ಏಪ್ರಿಲ್ 6 ರಿಂದ ಸರಾಸರಿ ಬಳಕೆಯ ಸರಿಸುಮಾರು 90% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಅದಕ್ಕಾಗಿ ದೇಶಾದ್ಯಂತ ಎಲ್ಲಾ ಸಂಸ್ಕರಣಾಗಾರಗಳು ಸಾಕಷ್ಟು ಕಚ್ಚಾತೈಲ ನಿಕ್ಷೇಪಗಳೊಂದಿಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ದೇಶಾದ್ಯಂತ ಪೆಟ್ರೋಲ್ ಪಂಪ್‌ಗಳು ಸಂಪೂರ್ಣವಾಗಿ ದಾಸ್ತಾನು ಮಾಡಲ್ಪಟ್ಟಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.














