ಲಕ್ನೋ : ಭಾರತದ ಹಲವೆಡೆ ವಿಚ್ಛೇದನವನ್ನು ಇಂದಿಗೂ ಕಳಂಕ ಎಂಬಂತೆ ನೋಡಲಾಗುತ್ತದೆ. ಇದರ ನಡುವೆ ಉತ್ತರ ಪ್ರದೇಶದ ಮೀರತ್‌ನಲ್ಲಿ ತನ್ನ ಪತಿಯಿಂದ ವಿಚ್ಛೇದನ ಪಡೆದ ಮಗಳನ್ನು ತಂದೆಯೊಬ್ಬ ಬ್ಯಾಂಡ್ ಜೊತೆ ಮೆರವಣಿಗೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಗಿದೆ.
ಕೌಟುಂಬಿಕ ಸಮಸ್ಯೆಯಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಣಿತ ಎಂಬ ಮಹಿಳೆಗೆ ಕೋರ್ಟ್ ವಿಚ್ಛೇದನ ನೀಡಿತ್ತು. ನಿವೃತ್ತ ನ್ಯಾಯಾಧೀಶರಾದ ಅವರ ತಂದೆ ನ್ಯಾಯಾಲಯದ ಸಂಕೀರ್ಣದ ಹೊರಗೆ ಡ್ರಮ್ ನುಡಿಸಿ, ಸಿಹಿ ಹಂಚಿ ಈ ಕ್ಷಣವನ್ನು ಸಂಭ್ರಮಿಸಿದ್ದಾರೆ. ಈ ವೇಳೆ ಸಂಬಂಧಿಕರು ಡ್ರಮ್ ಬೀಟ್‌ಗಳಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯ ತಂದೆ ಧರಿಸಿದ್ದ ಟಿ ಶರ್ಟ್‌ನಲ್ಲಿ ʻನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ. ಆಕೆ ನನ್ನ ಹೃದಯ, ನನ್ನ ಆತ್ಮʼ ಎಂಬ ಸಂದೇಶ ಬರೆಯಲಾಗಿತ್ತು. ಪ್ರಣಿತ ಧರಿಸಿದ್ದ ಟಿ ಶರ್ಟ್‌ನಲ್ಲಿ ʻನನ್ನ ಕುಟುಂಬ, ನನ್ನ ಜೀವನʼ ಎಂಬ ಸಾಲನ್ನು ಬರೆಯಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆ, 2021 ರಲ್ಲಿ ವಿಚ್ಛೇದನ ಪ್ರಕ್ರಿಯೆಗಳು ಪ್ರಾರಂಭವಾದವು. ನನ್ನ ತಂದೆ ನನಗೆ ಬೆಂಬಲ ನೀಡಿದರು. ಕಷ್ಟದ ಸಮಯದಲ್ಲಿ ಎಲ್ಲರಿಗೂ ಬೆಂಬಲವಾಗಿ ನಿಲ್ಲುವ ಕುಟುಂಬ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಅವರ ತಂದೆ, ನಿವೃತ್ತ ನ್ಯಾ.ಡಾ. ಜ್ಞಾನೇಂದ್ರ ಶರ್ಮಾ ಮಾತನಾಡಿ, ʻನನ್ನ ಮಗಳು ಜನಿಸಿದಾಗ ಡ್ರಮ್ಸ್ ನುಡಿಸಲಾಗಿತ್ತು. ಮಗಳ ಮೌಲ್ಯ ಅವಳ ಜೀವನದ ಪ್ರತಿಯೊಂದು ಹಂತದಲ್ಲೂ ಒಂದೇ ಆಗಿರುತ್ತದೆ ಎಂದು ತೋರಿಸಲು ಇಂದು ಮತ್ತೆ ಡ್ರಮ್ಸ್ ನುಡಿಸಲಾಯಿತು. ಅವಳನ್ನು ಖುಷಿಯಿಂದ ನೋಡಿಕೊಳ್ಳುವುದು ನನ್ನ ಕರ್ತವ್ಯ ಎಂದಿದ್ದಾರೆ.
ಪ್ರಣಿತಾ ಅವರು ಜ್ಞಾನೇಂದ್ರ ಶರ್ಮಾ ಅವರ ಏಕೈಕ ಪುತ್ರಿಯಾಗಿದ್ದು, 2018 ರಲ್ಲಿ ಭಾರತೀಯ ಸೇನೆಯ ಮೇಜರ್ ಆಗಿದ್ದ ಗೌರವ್ ಅಗ್ನಿಹೋತ್ರಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗನಿದ್ದಾನೆ. ಬಳಿಕ ಪ್ರಣಿತ ಅವರಿಗೆ ಅತ್ತೆ-ಮಾವರಿಂದ ಕಿರುಕುಳ ಹೆಚ್ಚಾಗಿತ್ತು. ಇದರಿಂದ ಅವರು ವಿಚ್ಛೇದನ ಪಡೆದಿದ್ದಾರೆ.














