ನವಾಡ (ಬಿಹಾರ): ತಮ್ಮ ವಿರೋಧದ ನಡುವೆ ಮದುವೆಯಾಗಿದ್ದ ಪುತ್ರಿಯನ್ನು ಹೆತ್ತ ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಮಗಳ ಮೃತದೇಹವನ್ನು ಚೀಲದಲ್ಲಿ ತುಂಬಿ ನದಿಗೆ ಎಸೆದಿದ್ದಾನೆ. ಘಟನೆ ಬಿಹಾರದ ನವಾಡಾದಲ್ಲಿ ನಡೆದಿದೆ. ಧಮೌಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ನದಿಯಲ್ಲಿ 20 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಏಪ್ರಿಲ್ 30 ರಂದು, ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಸಿಟ್ಟಿನಲ್ಲಿ ಪುತ್ರಿಯ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ತಂದೆ, ಆಕೆಯ ಶವವನ್ನು ಚೀಲದಲ್ಲಿ ತುಂಬಿದ್ದಾನೆ. ಬಳಿಕ ಸಾಕ್ಷ್ಯ ನಾಶಮಾಡುವ ಸಲುವಾಗಿ ಸ್ಥಳೀಯ ಕೌಡಿಹಾರಿ ನದಿಗೆ ಆಕೆಯ ಮೃತದೇಹ ಎಸೆದಿದ್ದಾನೆ. ಮಗಳ ವರ್ತನೆ ನಮಗೆ ಬೇಸರ ತರಿಸಿತ್ತು. ಹಾಗಾಗಿ ಕೊಲೆ ಮಾಡಿರುವುದಾಗಿ ತಂದೆ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಧಮೌಲ್ ಠಾಣಾ ಪೊಲೀಸರು ಆರೋಪಿ ತಂದೆ ಹಾಗೂ ಮೃತಳ ತಾಯಿ ಮತ್ತು ಸಹೋದರನನ್ನು ಬಂಧಿಸಿದ್ದಾರೆ. ಕೌದಿಹರಿ ನದಿಯ ದಡದಲ್ಲಿ ಹೂತು ಹಾಕಲಾಗಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಅಂತಲೂ ಪೊಲೀಸರು ಮಾಹಿತಿ ನೀಡಿದ್ದಾರೆ. “ಇದೊಂದು ಮರ್ಯಾದಾ ಹತ್ಯೆ. ನಾವು ಸದ್ಯ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದೇವೆ. ಮೂವರು ಆರೋಪಿಗಳ ವಿರುದ್ಧ ಕೊಲೆ ಮತ್ತು ಸಾಕ್ಷ್ಯಗಳನ್ನು ಮರೆಮಾಚುವುದು ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಧಮೌಲ್ ಪೊಲೀಸ್ ಠಾಣಾಧಿಕಾರಿ ಹಿಮಾಂಶು ಕುಮಾರ್ ತಿಳಿಸಿದ್ದಾರೆ. ಮೃತಳು ಎರಡು ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಯುವಕನನ್ನು ಮದುವೆಯಾಗಿದ್ದು, ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದಳು. ಕಾರಣಾಂತದಿಂದ ಇತ್ತೀಚೆಗೆ ಹೆತ್ತವರ ಮನೆಗೆ ಮರಳಿದ್ದಳು. ಇದರಿಂದ ಮನೆಯಲ್ಲಿ ಆಗಾಗ ಜಗಳ ಸಂಭವಿಸುತ್ತಿತ್ತು. ಏಪ್ರಿಲ್ 30ರ ರಾತ್ರಿ, ಮಗಳ ಕತ್ತು ಹಿಸುಕಿ ಕೊಲೆಗೈದಿದ್ದು, ಬಳಿಕ ಶವವನ್ನು ಚೀಲದಲ್ಲಿ ತುಂಬಿಸಿ ಯಾರಿಗೂ ಕಾಣದಂತೆ ನದಿಗೆ ಎಸೆದಿದ್ದ. ಘಟನೆ ನಡೆದ ಸುಮಾರು ಒಂದು ವಾರದ ನಂತರ, ಶವ ನದಿಯಲ್ಲಿ ಹೊರ ಬಂದಿದ್ದರಿಂದ ಆರೋಪಿಗಳಲ್ಲಿ ಆತಂಕ ಮೂಡಿಸಿತ್ತು.
ನಂತರ ಮೃತನ ತಂದೆ ಮತ್ತು ಸಹೋದರ ಶವವನ್ನು ಹೊರತೆಗೆದು, ಬೇರೆ ಸ್ಥಳಕ್ಕೆ ಸಾಗಿಸಿ, ಹೂಳಿದ್ದರು. ಗ್ರಾಮದಲ್ಲಿ ಯಾರಿಗೂ ಇದರ ಬಗ್ಗೆ ಗೊತ್ತಿರಲಿಲ್ಲ. ಆದರೆ, ಭಾನುವಾರ, ಪೊಲೀಸರಿಗೆ ಈ ಬಗ್ಗೆ ಗೊತ್ತಾಗಿತ್ತು. ಸದ್ಯ ಮೃತನ ತಂದೆ, ತಾಯಿ ಮತ್ತು ಸಹೋದರನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. “ನಿನ್ನೆ ರಾತ್ರಿ ಮೃತದೇಹ ಪತ್ತೆಯಾಗಿದೆ. ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತಳು ರಾಜಸ್ಥಾನದಲ್ಲಿ ವಿವಾಹಿತರಾಗಿದ್ದು, ವೈವಾಹಿಕ ಸಂಬಂಧ ಮುರಿದುಬಿದ್ದಿತ್ತು. ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಮೃತಳ ದೇಹದ ಮೇಲೆ ಕತ್ತು ಹಿಸುಕಿದ ಗುರುತುಗಳು ಸ್ಪಷ್ಟವಾಗಿ ಕಂಡುಬಂದಿವೆ ಎನ್ನಲಾಗುತ್ತಿದೆ.


















