ಮನೆ ರಾಜ್ಯ ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ – ಸಿಎಂಗೆ ಹಳೆಯ ದಿನಗಳನ್ನು ನೆನಪಿಸಿದ ಹೆಚ್‌ಡಿಕೆ

ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ – ಸಿಎಂಗೆ ಹಳೆಯ ದಿನಗಳನ್ನು ನೆನಪಿಸಿದ ಹೆಚ್‌ಡಿಕೆ

0

ಮೈಸೂರು : ಸಿದ್ದರಾಮಯ್ಯ ಜೆಡಿಎಸ್​ನಲ್ಲಿದ್ದಾಗ 58 ಸೀಟು ಗೆದ್ದಿದ್ದೆವು ಅಂತಾರೆ. 1999ರಲ್ಲೂ ಅವರು ಅಧ್ಯಕ್ಷರಾಗಿದ್ದರು, ಆಗ ಎಷ್ಟು ಸೀಟು ಗೆದ್ದಿದ್ದರು? ಮಹದೇವಪ್ಪ, ಸಿದ್ದರಾಮಯ್ಯ ಇಬ್ಬರೂ ಮನೆಗೆ ಬಂದು ಕಣ್ಣೀರಿಟ್ಟಿದ್ದರು. ಅವರು ಕಣ್ಣೀರು ಹಾಕುವಾಗ ಅಲ್ಲಿ ಬಕೆಟ್ ಇದ್ದಿದ್ದರೆ ತುಂಬಿಹೋಗುತ್ತಿತ್ತು. ಸಿದ್ದರಾಮಯ್ಯನವರು ಒಮ್ಮೆ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಿ ಎಂದು ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಹಿಂದೆ ಚುನಾವಣೆಯಲ್ಲಿ ದೇವೇಗೌಡರು, ನಾನು, ರೇವಣ್ಣ, ಮಹದೇವಪ್ಪ, ಸಿದ್ದರಾಮಯ್ಯ ಸೇರಿ ಬಹುತೇಕರು ಸೋತಿದ್ದೆವು. ಆಗ ನನಗೆ ರಾಜಕೀಯ ಬೇಡ ಅಂತ ಸಿದ್ದರಾಮಯ್ಯ ಕಣ್ಣೀರು ಹಾಕಿದ್ದರು. 2004ರಲ್ಲಿ ಮಂಡ್ಯ, ರಾಮನಗರದಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದಿಲ್ಲ.

ನಾವು ಕೂಡ ಸಿದ್ದರಾಮಯ್ಯರನವರನ್ನು ಕರೆಯಲಿಲ್ಲ. ಸಿದ್ದರಾಮಯ್ಯ ಅಹಿಂದ ಅಂತ ಸಮುದಾಯಗಳ ಸಂಘಟನೆ ಮಾಡಿದ್ರು. ದೇವೇಗೌಡರಿಗೆ ಅನ್ಯಾಯ ಮಾಡಿದರು, ಬೆನ್ನಿಗೆ ಚೂರಿ ಹಾಕಿದರು. 2006ರಲ್ಲಿ 200 ವೋಟ್​​​​​ಗಳಲ್ಲಿ ಗೆದ್ದಾಗ ಹೇಗಿತ್ತು ನೆನಪಿಸಿಕೊಳ್ಳಿ? ಎಂದು ಸಿಎಂಗೆ ಆ ದಿನಗಳನ್ನ ನೆನಪಿಸಿದರು.

ಚುನಾವಣೆಯಲ್ಲಿ ಗೆಲುವು ಸೋಲು ಸಾಮಾನ್ಯ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾಕೆ ಸೋತರು? ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ. ಸಿದ್ದರಾಮಯ್ಯ ಅಹಿಂದ ಚಾಂಪಿಯನ್ ಅಂತ ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಬಿಟ್ಟು ಬಂದು 5 ಸ್ಥಾನ ಗೆಲ್ಲಲಿ ಎಂದು ಸವಾಲು ಹಾಕಿದರು.