ಮಂಗಳೂರು : ವಿದೇಶದಲ್ಲಿ ತಲೆಮರೆಸಿಕೊಂಡ ಇಬ್ಬರು ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಕುಶಾಲನಗರದ ಸುಲೈಮಾನ್ ಅಲಿಯಾಸ್ ಸಮೀರ್ ಹಾಗೂ ಸಂಶುದ್ದೀನ್ ಅಲಿಯಾಸ್ ಅಲ್ತಾಫ್ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ರೆಡ್ ಕಾರ್ನರ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಎಸ್ಐ ಐತಪ್ಪ ಕೊಲೆ ಯತ್ನ ಪ್ರಕರಣ, 2013ರಲ್ಲಿ ದೇರಳಕಟ್ಟೆಯಲ್ಲಿ ನಡೆದ ಜೋಡಿಯ ಅಪಹರಣ, ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿ ಸುಲೈಮಾನ್ ವಿರುದ್ಧ 14 ಪ್ರಕರಣಗಳಿವೆ. ಇದರಲ್ಲಿ 7 ಪ್ರಕರಣಗಳು 307 ಸೆಕ್ಷನ್ ಅಡಿಯಲ್ಲಿ ದಾಖಲಾಗಿವೆ.
ಮತ್ತೋರ್ವ ಆರೋಪಿ ಸಂಶುದ್ದೀನ್ ಅಲಿಯಾಸ್ ಅಲ್ತಾಫ್ ವಿರುದ್ಧವೂ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. 2008ರಲ್ಲಿ ಪಾವಂಜೆಯ ಪ್ರವೀಣ್ ಅಪಹರಣ ಮತ್ತು ಹಲ್ಲೆ, ಬೆಲೆಬಾಳುವ ವಸ್ತುಗಳ ದೋಚಿದ ಪ್ರಕರಣ ಬಳಿಕ ಕ್ವಾರೆಯ ನೀರಿನಲ್ಲಿ ಮುಳುಗಿಸಿ ಕೊಲೆ, ಸಾಕ್ಷ್ಯ ನಾಶ ಆರೋಪ ಈತನ ಮೇಲಿದೆ.
ಸಂಶುದ್ದೀನ್ ಹೆಸರು ಬದಲಿಸಿ ಶೇಖ್ ಮೊಹಮ್ಮದ್ ಸಾದಿಕ್ ಹೆಸರಿನಲ್ಲಿ ಪಾಸ್ಪೋರ್ಟ್ ಪಡೆದು ವಿದೇಶಕ್ಕೆ ಪರಾರಿಯಾಗಿದ್ದಾನೆ. ಇಂಟರ್ಪೋಲ್ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಶೋಧ ಕಾರ್ಯ ಮುಂದುವರಿದಿದೆ.















