ಮನೆ ಸುದ್ದಿ ಜಾಲ ʻಮೋದಿ ಟೆರರಿಸ್ಟ್ʼ ಎಂದ ಖರ್ಗೆ ವಿರುದ್ಧ ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ ನಿಯೋಗ..!

ʻಮೋದಿ ಟೆರರಿಸ್ಟ್ʼ ಎಂದ ಖರ್ಗೆ ವಿರುದ್ಧ ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ ನಿಯೋಗ..!

0

ನವದೆಹಲಿ : ʻಮೋದಿ ಒಬ್ಬ ಭಯೋತ್ಪಾದಕʼ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನ ಖಂಡಿಸಿ ಬಿಜೆಪಿ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ಖರ್ಗೆ ಅವರ ಹೇಳಿಕೆಗೆ ಆಕ್ಷೇಪಣೆ ವ್ಯಕ್ತಪಡಿಸಿಲು ಕೇಂದ್ರ ಸಚಿವ ಕಿರಣ್ ರಿಜಿಜು ನೇತೃತ್ವದ ಬಿಜೆಪಿ ನಿಯೋಗ ಇಂದು ಚುನಾವಣಾ ಆಯೋಗವನ್ನ ಭೇಟಿ ಮಾಡಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಹಿರಿಯ ನಾಯಕರು ನಿಯೋಗದಲ್ಲಿದ್ದರು. ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಬಿಜೆಪಿ ನಿಯೋಗವು ಖರ್ಗೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದವು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕಿರಣ್‌ ರಿಜಿಜು, ಪ್ರಧಾನಿಯನ್ನ ಭಯೋತ್ಪಾದಕ ಎಂದು ಕರೆಯುವುದು ಇಡೀ ದೇಶಕ್ಕೆ ಅಪಮಾನ. ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕವಾಗಿ ಪ್ರಧಾನಿಗಳನ್ನು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಇದಕ್ಕೂ ಮುನ್ನವೇ ಚುನಾವಣಾ ಸಮಿತಿಗೆ ಪತ್ರ ಬರೆದಿದ್ದ ಬಿಜೆಪಿ, ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹೇಳಿಕೆಯು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 175 ರ ಅಡಿಯಲ್ಲಿ ಅಪರಾಧವಾಗಿದೆ ಮತ್ತು ಪ್ರಾಥಮಿಕವಾಗಿ ಮಾನನಷ್ಟ ಪ್ರಕರಣವಾಗಿದೆ ಎಂದು ಆರೋಪಿಸಿತ್ತು.

ಅಲ್ಲದೇ ಚುನಾವಣಾ ಆಯೋಗ ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಎಐಸಿಸಿ ಮುಖ್ಯಸ್ಥರಾದ ಖರ್ಗೆ ಅವರು ಸಾರ್ವಜನಿಕವಾಗಿ ಪ್ರಧಾನಿಗಳನ್ನ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿತ್ತು. ಕಿಚ್ಚು ಹೊತ್ತಿಸಿದ ಖರ್ಗೆ ಹೇಳಿಕೆ – ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಎಐಡಿಎಂಕೆ ಪಕ್ಷವನ್ನ ಟೀಕಿಸುವ ಭರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಎಐಡಿಎಂಕೆ ಪಕ್ಷವು ಮೋದಿ ಅವರೊಂದಿಗೆ ಹೇಗೆ ಸೇರಬಹುದು? ಮೋದಿ ಒಬ್ಬ ಭಯೋತ್ಪಾದಕ, ಅವರು ಸಮಾನತೆಯನ್ನ ನಂಬುವುದಿಲ್ಲ. ಅವರ ಪಕ್ಷಕ್ಕೂ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆಯಿಲ್ಲ. ಈ ಜನ ಅವರೊಂದಿಗೆ ಸೇರುತ್ತಿದ್ದಾರೆ ಅಂದ್ರೆ, ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದರ್ಥ ಎಂದು ಹೇಳಿದ್ದರು.