ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಕಳೆದ ವರ್ಷ ಯುವತಿಯೊಬ್ಬರನ್ನು ಬಲಿ ಪಡೆದಿದ್ದ ಇದೇ ಅಂಡರ್ ಪಾಸ್ ನಿನ್ನೆ ಮತ್ತೆ ಅಪಾಯದ ಮಟ್ಟ ಮೀರಿ ತುಂಬಿ ಹರಿಯುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.
ನಿನ್ನೆ ಸಂಜೆ ಮಳೆ ಸುರಿಯಲು ಆರಂಭವಾದ ಕೆಲವೇ ನಿಮಿಷಗಳಲ್ಲಿ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಅಪಾಯದ ಮಟ್ಟವನ್ನು ತಲುಪಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಲವು ಕಾರುಗಳು ಅಂಡರ್ ಪಾಸ್ ದಾಟಿದ ಕೇವಲ 5 ನಿಮಿಷಗಳಲ್ಲೇ ಇಡೀ ಅಂಡರ್ ಪಾಸ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿತ್ತು.
ಒಂದು ವೇಳೆ ವಾಹನಗಳು ಸಂಚರಿಸುತ್ತಿರುವಾಗಲೇ ಈ ಮಟ್ಟಕ್ಕೆ ನೀರು ತುಂಬಿದ್ದರೆ ಕಳೆದ ಬಾರಿಯಂತೆ ವಾಹನಗಳು ಸಿಲುಕಿಕೊಂಡು ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆ ಇತ್ತು. ಆ ಮೂಲಕ ನಿನ್ನೆ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.













