ಮೈಸೂರು: ತಾಲ್ಲೂಕಿನ ಗುಡುಮಾದನಹಳ್ಳಿಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಮಾದರಿ ಆಸ್ಪತ್ರೆಯ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪೌರ ಕಾರ್ಮಿಕರ ಸಂಘಟನೆಗಳ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದ್ದು ಸಂಘಟನೆಯ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮಾತನಾಡಿ, ‘ಸರ್ಕಾರ ಬೆಂಗಳೂರು ಮಾದರಿಯಲ್ಲಿ ಮೈಸೂರು ಭಾಗದಲ್ಲಿಯೂ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿರುವುದು ಹೇಮ್ಮೆಯಾಗಿದೆ.
ಇದಕ್ಕಾಗಿ 2025- 26ನೇ ಸಾಲಿನ ಆಯವ್ಯಯದಲ್ಲಿ ₹100 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಆದರೆ ಕೆಲವರ ಒತ್ತಡಕ್ಕೆ ಮಣಿದು ಕಾಮಗಾರಿ ವಿಳಂಬ ಮಾಡುತ್ತಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಗುಡುಮಾದನಹಳ್ಳಿಯ ಸರ್ವೆ ನಂ. 8, 60, 68ರಲ್ಲಿ ಸುಮಾರು 20 ಎಕರೆ ಸರ್ಕಾರಿ ಜಾಗವಿದೆ. ಹಲವಾರು ಮಂದಿ ಇದರಲ್ಲಿ ವ್ಯವಸಾಯ ಮಾಡಿ ಈಗಾಗಲೇ ಸಾಕಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ. ಹೀಗಾಗಿ ನಿಜಕ್ಕೂ ಇವರು ಬಡವರಾಗಿದ್ದರೆ ಬೇರೆ ಕಡೆ ಜಾಗ ಕೊಡಲಿ. ಆದರೆ ಇದೇ ಜಾಗದಲ್ಲಿ ನಿಮ್ಹಾನ್ಸ್ ನಿರ್ಮಾಣವಾಗಬೇಕು’ ಎಂದು ಆಗ್ರಹಿಸಿದರು ಎನ್ನಲಾಗಿದೆ.
ಆದರಿಂದ ಈ ಆಸ್ಪತ್ರೆ ನಿರ್ಮಾಣವಾದರೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈಗಾಗಲೇ ಆರೋಗ್ಯ ಇಲಾಖೆಗೆ ಭೂಮಿ ಹಸ್ತಾಂತರ ಆಗಿರುವುದರಿಂದ ಯಾವುದೇ ಒತ್ತಡ, ಪ್ರತಿಭಟನೆಗಳಿಗೂ ಮಣಿಯದೆ ಕೂಡಲೇ ಆಸ್ಪತ್ರೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ದಿನೇಶ್ಕುಮಾರ್, ಸಲಹೆಗಾರ ಶಿವ ಶ್ರೀನಿವಾಸ್, ಸಿ.ಆರ್.ವಿಜಯ್, ಅಂಜಲಿ, ವಸಂತಕುಮಾರಿ, ಪವಿತ್ರ ಹಾಗೂ ಇತರರು ಭಾಗವಹಿಸಿದ್ದರು ಎನ್ನಲಾಗುತ್ತಿದೆ.

















