ಮನೆ ರಾಜ್ಯ ಪೊಲೀಸರು ಮತ್ತು ಪ್ರಭಾವಿಗಳೇ ಟಾರ್ಗೆಟ್; ಅತ್ಯಾಚಾರ ದೂರು ನೀಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ, ಕಿಲಾಡಿ ಮಹಿಳೆ ಕೊನೆಗೂ...

ಪೊಲೀಸರು ಮತ್ತು ಪ್ರಭಾವಿಗಳೇ ಟಾರ್ಗೆಟ್; ಅತ್ಯಾಚಾರ ದೂರು ನೀಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ, ಕಿಲಾಡಿ ಮಹಿಳೆ ಕೊನೆಗೂ ಅರೆಸ್ಟ್..!

0

ಮ್ಯಾಟ್ರಿಮೋನಿ ಆ್ಯಪ್‌ಗಳನ್ನು ಬಳಸಿಕೊಂಡು ಶ್ರೀಮಂತರು, ಪ್ರಭಾವಿ ವ್ಯಕ್ತಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನೇ ಗುರಿಯಾಗಿಸಿ, ಅತ್ಯಾಚಾರ ಮತ್ತು ವಂಚನೆಯ ಸುಳ್ಳು ದೂರುಗಳನ್ನು ನೀಡಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ, ಖತರ್ನಾಕ್ ಮಹಿಳೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ​ಬಂಧಿತ ಮಹಿಳೆಯನ್ನು ರೇಷ್ಮಾ ಶಂಕರ್ ಮುತಾಗರ್ ಎಂದು ಗುರುತಿಸಲಾಗಿದೆ.

ಈಕೆಯ ಕೃತ್ಯಗಳ ಹಿನ್ನೆಲೆಯಲ್ಲಿ ಪೊಲೀಸರು ಈಗ ಈಕೆಯ ಮೇಲೆ ‘ರೌಡಿಶೀಟರ್‌’ ದಾಖಲಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ. ರಾಮರಾಜನ್ ತಿಳಿಸಿದ್ದಾರೆ. ಮ್ಯಾಟ್ರಿಮೋನಿಯಲ್ಲಿ ಬಲೆ, ನಕಲಿ ಫೋಟೋ ಅಸ್ತ್ರ – ​ಈ ಕಿಲಾಡಿ ಮಹಿಳೆಯ ವಂಚನೆಯ ಜಾಲ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಮದುವೆಗೆ ಸಂಬಂಧಿಸಿದ ವಿವಿಧ ಮ್ಯಾಟ್ರಿಮೋನಿ ಆ್ಯಪ್‌ಗಳಲ್ಲಿ ಸುಂದರವಾದ ನಕಲಿ ಫೋಟೋಗಳನ್ನು ಅಪ್‌ಲೋಡ್ ಮಾಡಿ, ದೊಡ್ಡ ದೊಡ್ಡ ವ್ಯಕ್ತಿಗಳು ಹಾಗೂ ಶ್ರೀಮಂತರನ್ನು ತನ್ನತ್ತ ಸೆಳೆಯುತ್ತಿದ್ದಳು.

ಒಮ್ಮೆ ಅವರು ಪರಿಚಯವಾಗಿ ಮಾತನಾಡಲು ಶುರು ಮಾಡಿದರೆ, ಯಾವುದೋ ಒಂದು ನಿಗದಿತ ಸ್ಥಳಕ್ಕೆ ಭೇಟಿಯಾಗಲು ಕರೆಯುತ್ತಿದ್ದಳು. ಅಲ್ಲಿಗೆ ಬಂದ ತಕ್ಷಣ ಅವರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸಿ, ದೂರು ನೀಡುವುದಾಗಿ ಹೆದರಿಸಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಕೀಳುತ್ತಿದ್ದಳು. ​ಇಷ್ಟೇ ಅಲ್ಲದೆ, ಈಕೆ ತನಗೆ ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಹೋದಾಗ, ಅಲ್ಲಿಯೂ ತನ್ನ ವಿಕೃತಿ ಮೆರೆಯುತ್ತಿದ್ದಳು. ಇತ್ತೀಚೆಗೆ ತುಮಕೂರಿನ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ, ಮದುವೆಯಾಗಿ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಳು.

ಆದರೆ, ಈಕೆಯ ನಡವಳಿಕೆ ಕಂಡು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ ಪೊಲೀಸ್ ಇನ್‌ಸ್ಪೆಕ್ಟರ್ ಮೇಲೆಯೇ “ನನ್ನಿಂದ 1 ಲಕ್ಷ ರೂ. ಲಂಚ ಪಡೆದಿದ್ದಾರೆ” ಎಂದು ಆರೋಪ ಮಾಡಿ ಇಲಾಖೆಯನ್ನೇ ಬೆದರಿಸಲು ಯತ್ನಿಸಿದ್ದಳು. ಅಲ್ಲದೆ, ತನಗೆ ನ್ಯಾಯ ಕೊಡಿಸಲು ಬಂದ ಪೊಲೀಸ್ ಅಧಿಕಾರಿಯೇ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬ್ಲ್ಯಾಕ್‌ಮೇಲ್ ಮಾಡುವ ಹಂತಕ್ಕೂ ಇವಳು ಹೋಗುತ್ತಿದ್ದಳು ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

​ಸುಮಾರು ಎಂಟು ತಿಂಗಳ ಹಿಂದೆ ಘಟಪ್ರಭಾ ಪೊಲೀಸ್ ಠಾಣೆಯಲ್ಲೂ ಸಹ “ಒಬ್ಬ ವ್ಯಕ್ತಿ ತನಗೆ ಮೋಸ ಮಾಡಿ ಓಡಿ ಹೋಗಿದ್ದಾನೆ” ಎಂದು ಈಕೆ ದೂರು ದಾಖಲಿಸಿದ್ದಳು. ಸದ್ಯ ಈಕೆಯ ನಿರಂತರ ಸುಳ್ಳು ದೂರುಗಳು ಮತ್ತು ಹಣ ವಸೂಲಿ ದಂಧೆಗೆ ಬ್ರೇಕ್ ಬಿದ್ದಿದ್ದು, ಕಂಬಿ ಎಣಿಸುವಂತಾಗಿದೆ. ಇಂತಹ ಮ್ಯಾಟ್ರಿಮೋನಿ ವಂಚಕರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ತಿಳಿಸಿದ್ದಾರೆ.