ಕಾರವಾರ (ಮೇ 19): ಹವಾಮಾನ ವೈಪರಿತ್ಯ ಹಿನ್ನೆಲೆ ಅರಬ್ಬಿ ಸಮುದ್ರ, ಶರಾವತಿ ಹಿನ್ನೀರು ಮತ್ತು ಅಘನಾಶಿನಿ ನದಿಯಲ್ಲಿ ಜಲಸಾಹಸ ಕ್ರೀಡೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇಂದಿನಿಂದ (ಮೇ 19) ಮಳೆಗಾಲ ಮುಕ್ತಾಯವರೆಗೆ ಜಲಸಾಹಸ ಕ್ರೀಡೆಗೆ ನಿರ್ಬಂಧ ವಿಧಿಸಿ ಜಲಾಸಾಹಸ ಕ್ರಿಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ನೀರಲ್ಲಿ ಮೋಜು ಮಸ್ತಿ ಮಾಡಲೆಂದೇ ಜಿಲ್ಲೆಗೆ ಹೆಚ್ಚಾಗಿ ಆಗಮಿಸುತ್ತಿದ್ದ ಪ್ರವಾಸಿಗರಿಗೆ ಭಾರಿ ನಿರಾಸೆಯಾಗಿದೆ. ಬೀಚ್ನಲ್ಲಿ ಪ್ರೀವೆಡ್ಡಿಂಗ್ ಸೆಟ್ ಅಳವಡಿಕೆಗೂ ಬ್ರೇಕ್ ಹಾಕಲಾಗಿದೆ ಎಂಬುದು ತಿಳಿದುಬಂದಿದೆ.
ಈ ಕುರಿತು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮುಖ್ಯ ಬೀಚ್, ಓಂ ಬೀಚ್, ಕುಡ್ಲೆ ಬೀಚ್, ಹಾಫ್ಮೂನ್ ಬೀಚ್, ಪ್ಯಾರಡೈಸ್ ಬೀಚ್, ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಬೀಚ್ ಮತ್ತು ಕಾರವಾರ ಬೀಚ್ಗಳಲ್ಲಿ ಪ್ರವಾಸಿ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆ ಚಟುವಟಿಕೆಗೆ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿತ್ತು. ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಚಟುವಟಿಕೆ ನಡೆಸಲೂ ಅನುಮತಿ ನೀಡಲಾಗಿತ್ತು. ಹಾಗೆಯೇ ಕುಮಟಾ ತಾಲೂಕಿನ ತದಡಿ ಅಘನಾಶಿನಿ ನದಿ ತೀರ, ಹೊನ್ನಾವರ ಮತ್ತು ಕಾಸರಕೋಡು ಭಾಗದ ಶರಾವತಿ ಹಿನ್ನೀರಿನಲ್ಲಿ ಪ್ರವಾಸಿ ಬೋಟಿಂಗ್ ಚಟುವಟಿಕೆ ಕೈಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಇವೆಲ್ಲವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರೋದಾಗಿ ಜಲಾಸಾಹಸ ಕ್ರಿಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ತಿಳಿಸಿದೆ ಎನ್ನಲಾಗುತ್ತಿದೆ.

















