ಮನೆ ಸುದ್ದಿ ಜಾಲ ಜೈಲಿನಿಂದ ಪರಾರಿಯಾಗಿ 40 ಸಿನಿಮಾಗಳಲ್ಲಿ ನಟಿಸಿದ್ದ ಜೀವಾವಧಿ ಕೈದಿ ಅರೆಸ್ಟ್! 12 ವರ್ಷಗಳ ಬಳಿಕ ಬಯಲಾಯ್ತು...

ಜೈಲಿನಿಂದ ಪರಾರಿಯಾಗಿ 40 ಸಿನಿಮಾಗಳಲ್ಲಿ ನಟಿಸಿದ್ದ ಜೀವಾವಧಿ ಕೈದಿ ಅರೆಸ್ಟ್! 12 ವರ್ಷಗಳ ಬಳಿಕ ಬಯಲಾಯ್ತು ಅಸಲಿ ಮುಖ

0

ಗುಜರಾತ್‌ :ಅಹಮದಾಬಾದ್‌ನಲ್ಲಿ ನಡೆದಿರುವ ಒಂದು ರೋಚಕ ಘಟನೆ ಇದೀಗ ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ಪರಾರಿಯಾಗಿದ್ದು, ಕಳೆದ 12 ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣು ಎರಚುತ್ತಲೇ ಸಿನಿಮಾ ಮತ್ತು ವೆಬ್ ಸಿರೀಸ್ ಲೋಕದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾನೆ. ಇದೀಗ ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಈ ಖತರ್ನಾಕ್ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹೇಮಂತ್ ಮೋದಿ ಎಂದು ಗುರುತಿಸಲಾಗಿದೆ. ಆತ ಪ್ರಸ್ತುತ ಕಲರ್ಸ್ ಗುಜರಾತಿ ವಾಹಿನಿಯ ಜನಪ್ರಿಯ ಧಾರಾವಾಹಿ ‘ಮೋತಿ ಬಾನಿ ನಾನಿ ವಹು’ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಪಿ.ಎಂ. ಧಕಾಡಾ, ಆರೋಪಿ ತನ್ನ ರೂಪ, ಹೇರ್ ಸ್ಟೈಲ್ ಹಾಗೂ ಗೆಟಪ್ ಸಂಪೂರ್ಣ ಬದಲಿಸಿಕೊಂಡಿದ್ದರಿಂದ ಮೊದಲ ನೋಟಕ್ಕೆ ಗುರುತಿಸಲು ಕಷ್ಟವಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ ಆರೋಪಿಯ ದೇಹದ ಮೇಲಿದ್ದ ಹಳೆಯ ಮಚ್ಚೆಗಳು ಮತ್ತು ಗಾಯದ ಗುರುತುಗಳನ್ನು ಪೊಲೀಸ್ ದಾಖಲೆಗಳೊಂದಿಗೆ ಹೋಲಿಕೆ ಮಾಡಿದಾಗ ಆತನ ನಿಜವಾದ ಗುರುತು ಬಹಿರಂಗವಾಗಿದೆ. ನಂತರ ನಡೆದ ವಿಚಾರಣೆಯಲ್ಲಿ ಆತನೇ 12 ವರ್ಷಗಳಿಂದ ಪರಾರಿಯಾಗಿದ್ದ ಜೀವಾವಧಿ ಕೈದಿ ಎಂಬುದು ದೃಢಪಟ್ಟಿದೆ.

ಹೇಮಂತ್ ಮೋದಿ ಮೂಲತಃ ಅಹಮದಾಬಾದ್‌ನ ನರೋಡಾ ಪ್ರದೇಶದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ವಕೀಲನಾಗಿದ್ದನು. 2005 ರ ಜೂನ್ 12 ರಂದು ನೆರೆಹೊರೆಯವರ ಜೊತೆ ನಡೆದ ಜಗಳದ ವೇಳೆ ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ಸೇರಿ ನರೇಂದ್ರ ತಮ್ಲೆ ಎಂಬಾತನನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ. ಬಳಿಕ 2008 ರಲ್ಲಿ ನ್ಯಾಯಾಲಯ ಹೇಮಂತ್ ಸೇರಿದಂತೆ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಜೈಲಿನಲ್ಲಿದ್ದ ಸಮಯದಲ್ಲಿ ಕಾನೂನು ಜ್ಞಾನವನ್ನು ಬಳಸಿಕೊಂಡು ಜೈಲರ್ ವಿರುದ್ಧವೇ ಅನೇಕ ಅರ್ಜಿಗಳನ್ನು ಸಲ್ಲಿಸಿದ್ದ ಆತ, ತನಗೆ ಮಾನಸಿಕ ಖಿನ್ನತೆ ಇದೆ ಎಂದು ಹೇಳಿ ಮೆಹ್ಸಾನಾ ಜೈಲಿಗೆ ವರ್ಗಾವಣೆಯಾಗಿದ್ದ. ಅಲ್ಲಿಂದ ಬಳಿಕ ಗುಜರಾತ್ ಹೈಕೋರ್ಟ್ ಮೂಲಕ 30 ದಿನಗಳ ಪೆರೋಲ್ ಪಡೆದು ಹೊರಬಂದ ಆತ ಮರಳಿ ಜೈಲಿಗೆ ಹಾಜರಾಗದೆ ಪರಾರಿಯಾಗಿದ್ದ.

ಪರಾರಿಯಾದ ನಂತರ ಆತ ತನ್ನ ಹೆಸರನ್ನು ಬದಲಿಸಿಕೊಂಡು ಮೊದಲು ಪಟಾನ್ ಭಾಗದಲ್ಲಿ ತಲೆಮರೆಸಿಕೊಂಡಿದ್ದ. ನಂತರ ಮುಂಬೈಗೆ ತೆರಳಿ ‘ಟ್ವಿಂಕಲ್ ಮುಕುಂದ್ಭಾಯ್ ಡೇವ್’ ಎಂಬ ಹೆಸರಿನಲ್ಲಿ ಬದುಕು ಆರಂಭಿಸಿದ್ದಾನೆ. ಬಳಿಕ ರಂಗಭೂಮಿ ಮತ್ತು ಧಾರಾವಾಹಿಗಳಲ್ಲಿ ನಟಿಸಲು ಶುರುಮಾಡಿ ‘ಸ್ವಪ್ನಿಲ್ ಮೋದಿ’ ಹೆಸರಿನಲ್ಲಿ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾನೆ.

ಪೊಲೀಸರ ಮಾಹಿತಿ ಪ್ರಕಾರ, ಆತ 40 ಕ್ಕೂ ಹೆಚ್ಚು ಸಿನಿಮಾಗಳು, ವೆಬ್ ಸಿರೀಸ್ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾನೆ. ಇದರಲ್ಲಿ 5 ಬಾಲಿವುಡ್ ಸಿನಿಮಾಗಳು ಮತ್ತು 20 ಕ್ಕೂ ಹೆಚ್ಚು ಗುಜರಾತಿ ಚಿತ್ರಗಳು ಸೇರಿವೆ. ಅಮೀರ್ ಖಾನ್ ಅಭಿನಯದ ‘ಥಗ್ಸ್ ಆಫ್ ಹಿಂದೂಸ್ತಾನ್’, ರಣವೀರ್ ಸಿಂಗ್ ನಟನೆಯ ‘ಜಯೇಶ್ಭಾಯ್ ಜೋರ್ದಾರ್’, ‘ಮೆಟ್ರೋ ಇನ್ ಡಿನೋ’, ‘ವಾಗ್ಲೆ ಕಿ ದುನಿಯಾ’ ಹಾಗೂ ಸನ್ನಿ ಡಿಯೋಲ್ ಅಭಿನಯದ ‘ಲಾಹೋರ್ 1947’ ಸಿನಿಮಾಗಳಲ್ಲೂ ಆತ ಕಾಣಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಆತ ಅಹಮದಾಬಾದ್‌ಗೆ ಮರಳಿದ್ದು, ಸುಳ್ಳು ಮಾಹಿತಿ ನೀಡಿ ಬಾಡಿಗೆ ಮನೆ ಪಡೆದಿದ್ದ ಎನ್ನಲಾಗಿದೆ. ಮನೆ ಮಾಲೀಕರಿಗೆ ಯಾವುದೇ ಆಧಾರ್ ಕಾರ್ಡ್ ಅಥವಾ ಗುರುತಿನ ದಾಖಲೆಗಳನ್ನು ನೀಡದಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಜೊತೆಗೆ ಸ್ಥಳೀಯ ಸಮಾಜ ಸೇವಕ ಮತ್ತು ವಕೀಲನೊಬ್ಬರಿಗೆ ಆತ ಹಳೆಯ ಕ್ರಿಮಿನಲ್‌ನಂತೆ ಕಂಡಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಮನೆ ಹೊರಗೆ ಬಂದ ತಕ್ಷಣ ಬಂಧಿಸಿದ್ದಾರೆ. ಇದರೊಂದಿಗೆ 12 ವರ್ಷಗಳಿಂದ ಪೊಲೀಸರನ್ನು ತಪ್ಪಿಸಿಕೊಂಡು ನಟನಾಗಿ ಬದುಕುತ್ತಿದ್ದ ಜೀವಾವಧಿ ಕೈದಿಯ ಕಥೆಗೆ ಕೊನೆ ಬಿದ್ದಿದೆ.