ಬೆಂಗಳೂರು, ಮೇ 22: ರಾಜಧಾನಿ ಬೆಂಗಳೂರಿನಲ್ಲಿ ಅಚ್ಚರಿ ಮೂಡಿಸುವಂತಹ ರಾಬರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ನೇಹಿತನ ಮನೆಯಲ್ಲೇ ದರೋಡೆ ನಡೆಯುವಂತೆ ಪ್ಲಾನ್ ಮಾಡಿದ್ದ ಮೇಸ್ತ್ರಿಯೊಬ್ಬ ಇದೀಗ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯ ಹುಣಸಮಾರನಹಳ್ಳಿಯಲ್ಲಿ ನಡೆದ ಈ ಪ್ರಕರಣದಲ್ಲಿ ಗುರುಪ್ರಸಾದ್ ಎಂಬಾತ ಪ್ರಮುಖ ಆರೋಪಿಯಾಗಿದ್ದಾನೆ. ತನ್ನ ಬಳಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರಿಗೆ ದರೋಡೆ ಮಾಡುವ ತರಬೇತಿ ನೀಡಿ, ಸ್ನೇಹಿತ ಸುದರ್ಶನ್ ಮನೆಗೆ ಕಳುಹಿಸಿ ರಾಬರಿ ಮಾಡಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಏಪ್ರಿಲ್ 18ರಂದು ನಡೆದ ಈ ಘಟನೆ ವೇಳೆ ಆರೋಪಿಗಳು ಮನೆಯೊಳಗೆ ನುಗ್ಗಿ ಚಾಕು ತೋರಿಸಿ ಬೆದರಿಕೆ ಹಾಕಿ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಜಾಲ ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದರು. ಇದೀಗ ಪ್ರಕರಣ ಸಂಬಂಧ ಗುರುಪ್ರಸಾದ್ ಸೇರಿದಂತೆ ಅರ್ಬಾಜ್ ಮತ್ತು ಜಿಬ್ರಾನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಗುರುಪ್ರಸಾದ್ ಮತ್ತು ಸುದರ್ಶನ್ ನಡುವೆ ಹಲವು ವರ್ಷಗಳ ಸ್ನೇಹವಿತ್ತು. ಈ ನಡುವೆ ಸುದರ್ಶನ್ ಹಾಗೂ ಅವರ ತಂದೆ ಕೃಷ್ಣಚಾರಿ ಹೊಸ ಮನೆ ನಿರ್ಮಾಣ ಮಾಡಲು ಮುಂದಾಗಿದ್ದರು. ಮನೆ ಕಟ್ಟುವ ಜವಾಬ್ದಾರಿಯನ್ನು ಮೇಸ್ತ್ರಿಯಾಗಿದ್ದ ಗುರುಪ್ರಸಾದ್ ಅವರಿಗೆ ನೀಡಲಾಗಿತ್ತು. ಸ್ನೇಹಿತ ಎನ್ನುವ ನಂಬಿಕೆಯಿಂದ ಕಡಿಮೆ ಹಣಕ್ಕೆ ಕೆಲಸ ಒಪ್ಪಿಕೊಂಡಿದ್ದ ಗುರುಪ್ರಸಾದ್, ನಿರ್ಮಾಣ ಕಾಮಗಾರಿಯನ್ನು ನೋಡಿಕೊಳ್ಳುತ್ತಿದ್ದನು.
ಆದರೆ ಮನೆ ಕಾಮಗಾರಿ ನಡೆಯುವ ಸಂದರ್ಭ ಸುದರ್ಶನ್ ಮತ್ತು ಅವರ ತಂದೆ ಕೃಷ್ಣಚಾರಿ ನಿರಂತರವಾಗಿ ಕಾಮಗಾರಿಯಲ್ಲಿ ತಪ್ಪು ಹುಡುಕುತ್ತಿದ್ದರು ಎನ್ನಲಾಗಿದೆ. ಇದು ಸರಿಯಾಗಿಲ್ಲ, ಕೆಲಸ ಗುಣಮಟ್ಟದಲ್ಲಿ ಇಲ್ಲ ಎಂಬ ಕಾರಣಕ್ಕೆ ಆಗಾಗ್ಗೆ ವಾಗ್ವಾದ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಜೊತೆಗೆ ಸಂಪೂರ್ಣ ಹಣ ನೀಡುವುದಕ್ಕೂ ವಿಳಂಬ ಮಾಡುತ್ತಿದ್ದರು ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ಗುರುಪ್ರಸಾದ್ ಮಾನಸಿಕವಾಗಿ ಬೇಸತ್ತಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಇದರಿಂದ ಕೋಪಗೊಂಡ ಗುರುಪ್ರಸಾದ್ ತನ್ನ ಬಳಿ ಕೆಲಸ ಮಾಡುತ್ತಿದ್ದ ಅರ್ಬಾಜ್ ಮತ್ತು ಜಿಬ್ರಾನ್ ಗೆ ರಾಬರಿ ಮಾಡುವ ಬಗ್ಗೆ ಮಾಹಿತಿ ನೀಡಿ ತರಬೇತಿ ನೀಡಿದ್ದಾನೆ ಎನ್ನಲಾಗಿದೆ. ಬಳಿಕ ಸುದರ್ಶನ್ ಮನೆಗೆ ಹೋಗಿ ದರೋಡೆ ಮಾಡಲು ಸೂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮನೆಗೆ ನುಗ್ಗಿ 79 ಗ್ರಾಂ ಚಿನ್ನ, 64 ಗ್ರಾಂ ಬೆಳ್ಳಿ ಹಾಗೂ ಸುಮಾರು 12 ಲಕ್ಷ ರೂಪಾಯಿ ನಗದು ದೋಚಿಕೊಂಡು ಹೋಗಿದ್ದರು.
ಘಟನೆ ಬಳಿಕ ಆರೋಪಿಗಳು ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದರು. ಆದರೆ ಚಿಕ್ಕಜಾಲ ಪೊಲೀಸರು ನಿರಂತರ ತನಿಖೆ ನಡೆಸಿ ಕೊನೆಗೂ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 12 ಲಕ್ಷ ರೂಪಾಯಿ ನಗದು, ಸುಮಾರು 24 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಒಂದು ಕಾರು, ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಮತ್ತೊಂದು ಅಚ್ಚರಿಯ ಸಂಗತಿ ಕೂಡ ಬೆಳಕಿಗೆ ಬಂದಿದೆ. ದರೋಡೆ ವೇಳೆ ಆರೋಪಿಗಳು ಚಾಕು ತೋರಿಸಿ ಕಪಾಟಿನ ಕೀ ಪಡೆದು ಹಣವನ್ನು ಬ್ಯಾಗ್ ನಲ್ಲಿ ತುಂಬಿಕೊಂಡಿದ್ದರು. ಈ ವೇಳೆ ಮನೆಯ ಹಿರಿಯರಾದ ಕೃಷ್ಣಚಾರಿ, “ಎಲ್ಲಾ ಹಣ ತೆಗೆದುಕೊಂಡು ಹೋದರೆ ನಾವು ಬದುಕೋದು ಹೇಗೆ?” ಎಂದು ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಮಾತಿಗೆ ಮನಸ್ಸು ಕರಗಿದ ಆರೋಪಿಗಳು ದೋಚಿದ ಹಣದಲ್ಲೇ 50 ಸಾವಿರ ರೂಪಾಯಿ ಹಿಂದಿರುಗಿಸಿ, “ಇದರಿಂದ ಜೀವನ ಸಾಗಿಸಿ” ಎಂದು ಹೇಳಿದ್ದಾರಂತೆ.
ಆದರೆ ಇದೇ ವೇಳೆ ಪೊಲೀಸರಿಗೆ ದೂರು ನೀಡಿದರೆ ಜೀವಕ್ಕೆ ಅಪಾಯ ಉಂಟುಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಪ್ರಕರಣ ಸಂಬಂಧ ಚಿಕ್ಕಜಾಲ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


















