ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿ, ಇದೀಗ ನಾಲ್ಕನೇ ವರ್ಷಕ್ಕೆ ಹೆಜ್ಜೆ ಇಟ್ಟಿದೆ. ಆದರೆ, ಇದೇ ಹೊತ್ತಿನಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಕುರ್ಚಿ ಬಿಕ್ಕಟ್ಟು ತಾರಕಕ್ಕೇರುವ ಮುನ್ಸೂಚನೆಗಳು ಸಿಗುತ್ತಿವೆ. ನೆರೆಯ ಕೇರಳದಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ, ಹೈಕಮಾಂಡ್ ಇದೀಗ ಕರ್ನಾಟಕದ ನಾಯಕತ್ವ ಗೊಂದಲವನ್ನು ಬಗೆಹರಿಸಲು ಗಂಭೀರವಾಗಿ ಮುಂದಾದಂತೆ ಕಾಣುತ್ತಿದೆ. ನಗರದಲ್ಲಿ ಆಯೋಜಿಸಲಾಗಿದ್ದ ನೀಟ್ ಪರೀಕ್ಷೆ ಅಕ್ರಮಗಳ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಗುಪ್ತವಾಗಿ ನಡೆಸಿದ ಸಭೆಗಳು ಈ ಅನುಮಾನಗಳಿಗೆ ದಟ್ಟವಾದ ಪುಷ್ಟಿ ನೀಡಿವೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮೊಕ್ಕಾಂ ಹೂಡಿದ್ದ ಉಸ್ತುವಾರಿ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆ ಪ್ರತ್ಯೇಕವಾಗಿ ಸುದೀರ್ಘ ಸಭೆಗಳನ್ನು ನಡೆಸಿದ್ದಾರೆ. 3 ವರ್ಷಗಳ ಆಡಳಿತಾವಧಿ ಮುಗಿದಿರುವುದರಿಂದ ಅಧಿಕಾರ ಹಂಚಿಕೆಯ ಮೂಲ ಒಪ್ಪಂದದ ಕುರಿತು ಉಭಯ ನಾಯಕರ ಅಭಿಪ್ರಾಯಗಳನ್ನು ಸುರ್ಜೇವಾಲ ಆಲಿಸಿದ್ದಾರೆ ಎನ್ನಲಾಗಿದೆ. ರಾಜ್ಯದ ಈ ಪ್ರಮುಖ ಬಿಕ್ಕಟ್ಟನ್ನು ಬಗೆಹರಿಸಲು ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರೇ ನೇರವಾಗಿ ಅಖಾಡಕ್ಕಿಳಿಯಲಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರು ಮೇ 24 ರಿಂದ ಸುಮಾರು 11 ದಿನಗಳ ಕಾಲ ಬ್ರೆಜಿಲ್ ಹಾಗೂ ಜರ್ಮನಿ ಪ್ರವಾಸ ಕೈಗೊಳ್ಳಲಿದ್ದಾರೆ.
ಒಂದೊಮ್ಮೆ ರಾಹುಲ್ ಗಾಂಧಿ ಅವರ ಈ ವಿದೇಶಿ ಪ್ರವಾಸದ ವೇಳಾಪಟ್ಟಿಯಲ್ಲಿ ಏನಾದರೂ ಬದಲಾವಣೆ ಅಥವಾ ಮುಂದೂಡಿಕೆ ಆದಲ್ಲಿ, ತಕ್ಷಣವೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೈಕಮಾಂಡ್ನ ಮುಂದಿನ ಕರೆಯ ಕುರಿತು ನಾಳೆಯ ಒಳಗಾಗಿ (ಶುಕ್ರವಾರ) ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ಖಚಿತಪಡಿಸುವುದಾಗಿ ಸುರ್ಜೇವಾಲ ಭರವಸೆ ನೀಡಿದ್ದಾರೆ. ಒಂದೊಮ್ಮೆ ರಾಹುಲ್ ಗಾಂಧಿ ಅವರ ಪ್ರವಾಸ ನಿಗದಿಯಂತೆ ನಡೆದರೆ, ಈ ತಿಂಗಳ ಕೊನೆಯ ವಾರದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲೇ ದೆಹಲಿಯಲ್ಲಿ ಹೈ-ವೋಲ್ಟೇಜ್ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲೇ ಕರ್ನಾಟಕದ ಅಧಿಕಾರ ಸೂತ್ರದ ಅಂತಿಮ ಭವಿಷ್ಯ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

















