ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಈಗಾಗಲೇ ಪ್ಲೇ ಆಫ್ ಹಾದಿಯನ್ನು ಖಚಿತಪಡಿಸಿಕೊಂಡಿದ್ದು, ಗೆಲುವಿನೊಂದಿಗೆ ಪ್ಲೇ ಆಫ್‌ಗೆ ಎಂಟ್ರಿಕೊಡಲು ಸಜ್ಜಾಗಿದೆ. ಮೇಲ್ನೋಟಕ್ಕೆ ಎರಡೂ ತಂಡಗಳು ಬಲಿಷ್ಠವಾಗಿದ್ದು, ಇಂದು ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೇ ನಾಲ್ಕು ಅಪರೂಪದ ದಾಖಲೆಗಳು ನಿರ್ಮಾಣವಾಗಲಿವೆ ಎನ್ನಲಾಗುತ್ತದೆ.
ಈಗಾಗಲೇ 18 ಅಂಕಗಳನ್ನು ಹೊಂದಿರುವ ಆರ್‌ಸಿಬಿ ಇಂದಿನ ಪಂದ್ಯ ಗೆದ್ದರೇ 20 ಅಂಕ ಗಳಿಸಲಿದೆ. ಈ ಮೂಲಕ 2011ರ ಐಪಿಎಲ್ ಬಳಿಕ ಲೀಗ್ ಹಂತ ಮುಕ್ತಾಯದ ವೇಳೆಗೆ ಅಗ್ರಸ್ಥಾನಿಯಾಗಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟ ಸಾಧನೆಯನ್ನು ಆರ್‌ಸಿಬಿ ಮಾಡಲಿದೆ. ಆರ್‌ಸಿಬಿ ಇದುವರೆಗೂ ಐಪಿಎಲ್ ಲೀಗ್ ಹಂತದಲ್ಲಿ ಒಮ್ಮೆಯೂ 10 ಪಂದ್ಯಗಳನ್ನು ಗೆದ್ದಿಲ್ಲ. ಈಗಾಗಲೇ ಲೀಗ್‌ನಲ್ಲಿ 9 ಪಂದ್ಯ ಗೆದ್ದಿರುವ ಆರ್‌ಸಿಬಿ, ಹೊಸ ಇತಿಹಾಸ ಬರೆಯಲು ತುದಿಗಾಲಿನಲ್ಲಿ ನಿಂತಿದೆ. ಆರ್‌ಸಿಬಿ ತಂಡವು ಈ ಮೊದಲು 2011, 2025ರಲ್ಲಿ ತಲಾ 19 ಅಂಕಗಳನ್ನು ಗಳಿಸಿತ್ತು. ಈಗಾಗಲೇ 18 ಅಂಕ ಗಳಿಸಿರುವ ಆರ್‌ಸಿಬಿ ಇದೇ ಮೊದಲ ಬಾರಿಗೆ 20+ ಅಂಕ ಗಳಿಸುವ ಸುವರ್ಣಾವಕಾಶವನ್ನು ಹೊಂದಿದೆ. ಇದರಿಂದ ಆರ್‌ಸಿಬಿ ತಂಡವು ಇದೀಗ ಈ ಪಂದ್ಯವನ್ನು ಗೆದ್ದರೇ, ಐಪಿಎಲ್ ಇತಿಹಾಸದಲ್ಲೇ ನಾಲ್ಕನೇ ಬಾರಿಗೆ ಕ್ವಾಲಿಫೈಯರ್ 1 ಆಡುವ ಅರ್ಹತೆ ಪಡೆದ ತಂಡ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ ಎಂಬುದ್ದಾಗಿದೆ.

















