ಕೊಪ್ಪಳ, ಮೇ 23: ಕೊಪ್ಪಳ ಜಿಲ್ಲೆಯ ಹೊರವಲಯದಲ್ಲಿರುವ ಚುಕ್ಕನಕಲ್ ಸಮೀಪ ಶುಕ್ರವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟಿಟಿ ವಾಹನದ ಟೈರ್ ಬ್ಲಾಸ್ಟ್ ಆದ ಪರಿಣಾಮ ವಾಹನ ಪಲ್ಟಿಯಾಗಿ 12 ಮಂದಿ ಗಾಯಗೊಂಡಿದ್ದಾರೆ.ಹೈದರಾಬಾದ್‌ನಿಂದ ಗೋವಾ ಕಡೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ವಾಹನವು ವೇಗವಾಗಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಟೈರ್ ಸ್ಫೋಟಗೊಂಡಿದೆ. ಟೈರ್ ಬ್ಲಾಸ್ಟ್ ಆದ ತಕ್ಷಣ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಮಧ್ಯೆಯೇ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಲ್ಲಿ 2 ವರ್ಷದ ಮಗು ಕೂಡ ಸೇರಿದೆ. ಮಗುವಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನುಳಿದ ಗಾಯಾಳುಗಳಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದರು. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಕೊಪ್ಪಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಟಿಟಿ ವಾಹನದ ಟೈರ್ ದಿಢೀರ್ ಸ್ಫೋಟಗೊಂಡಿರುವುದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಘಟನೆಯ ಬಳಿಕ ಕೆಲಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.ಕೊಪ್ಪಳದಲ್ಲಿ ನಡೆದ ಈ ರಸ್ತೆ ಅಪಘಾತ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ದೂರ ಪ್ರಯಾಣಕ್ಕೂ ಮೊದಲು ವಾಹನಗಳ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


















