ಮನೆ ಸುದ್ದಿ ಜಾಲ ರಿಯಾಲಿಟಿ ಶೋ ವಿರುದ್ಧ ನೆಟ್ಟಿಗರ ಆಕ್ರೋಶ; ವಿವಾಹೇತರ ಸಂಬಂಧ ವೈಭವೀಕರಣ ಆರೋಪ

ರಿಯಾಲಿಟಿ ಶೋ ವಿರುದ್ಧ ನೆಟ್ಟಿಗರ ಆಕ್ರೋಶ; ವಿವಾಹೇತರ ಸಂಬಂಧ ವೈಭವೀಕರಣ ಆರೋಪ

0

ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಒಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ವಿವಾಹೇತರ ಸಂಬಂಧ (Extra Marital Relationship), ಸಂಗಾತಿಗೆ ವಂಚನೆ ಹಾಗೂ ಅಕ್ರಮ ಸಂಬಂಧಗಳನ್ನು ವೈಭವೀಕರಿಸಲಾಗುತ್ತಿದೆ ಎಂಬ ಆರೋಪದಡಿ ನೆಟ್ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿರುವ ‘ದೇಸಿ ಬ್ಲಿಂಗ್’ ಶೋ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದವರ ವಿವಾಹೇತರ ಸಂಬಂಧ ಕುರಿತ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ರೋಲ್ ಹಾಗೂ ಟೀಕೆಗೆ ಕಾರಣವಾಗಿವೆ. ವಿಶೇಷವಾಗಿ ಸತೀಶ್ ಸನ್ಪಾಲ್ ಮತ್ತು ತಬಿಂದಾ ಸನ್ಪಾಲ್ ನೀಡಿದ ಹೇಳಿಕೆಗಳು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿವೆ. ಶೋನ ಕೆಲವು ಕ್ಲಿಪ್‌ಗಳು ಹಾಗೂ ಕಾಮೆಂಟ್‌ಗಳು ವೈರಲ್ ಆದ ಬಳಿಕ ವಿರೋಧದ ಧ್ವನಿ ಮತ್ತಷ್ಟು ಜೋರಾಗಿದೆ.ಸರಣಿಯಲ್ಲಿ ಕಾಣಿಸಿಕೊಂಡ ದಂಪತಿಯ ವರ್ತನೆ ಹಾಗೂ ಅವರ ಹೇಳಿಕೆಗಳನ್ನು ಅನೇಕ ವೀಕ್ಷಕರು ಖಂಡಿಸಿದ್ದಾರೆ. ಆಧುನಿಕ ಸಂಬಂಧಗಳು ಹಾಗೂ ಐಷಾರಾಮಿ ಜೀವನಶೈಲಿಯನ್ನು ಮನೋರಂಜನೆ ಹೆಸರಿನಲ್ಲಿ ತೋರಿಸಿ, ಕೆಟ್ಟ ಸಂಬಂಧಗಳ ಮಾದರಿಯನ್ನು ಉತ್ತೇಜಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈ ವಿವಾದದ ನಡುವೆ ಚಿತ್ರ ನಿರ್ಮಾಪಕಿ ಲಕ್ಷ್ಮಿ ಆರ್ ಅಯ್ಯರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಅವರು, “ಒಬ್ಬ ಮಹಿಳೆಯ ಜೊತೆ ಪದೇ ಪದೇ ಇದ್ದರೂ ಗಂಡ ಮೋಸ ಮಾಡಬಾರದು, ಉಳಿದದ್ದರಿಂದ ನನಗೆ ಸಮಸ್ಯೆ ಇಲ್ಲ ಎಂದು ಪತ್ನಿ ಹೇಳುವ ರಿಯಾಲಿಟಿ ಶೋ ಕ್ಲಿಪ್ ನೋಡಿದೆ. ಇಂತಹ ಅಸಂಬದ್ಧ ವಿಚಾರಗಳನ್ನು ಸಾಮಾನ್ಯ ಎಂಬಂತೆ ತೋರಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದ್ದಾರೆ.

ಮುಂದುವರಿದು, “‘ಆಧುನಿಕ’ ಅಥವಾ ‘ಕೂಲ್’ ಎಂಬ ಹೆಸರಿನಲ್ಲಿ ಇಂತಹ ಕೆಟ್ಟ ಉದಾಹರಣೆಗಳನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ. ನಿಷ್ಠಾವಂತರಾಗಿರುವುದು ಮೋಸ ಮಾಡುವುದಕ್ಕಿಂತ ಹೆಚ್ಚು ಆಕರ್ಷಕ. ಪ್ರಾಮಾಣಿಕತೆ ಇನ್ನೂ ಮೌಲ್ಯ ಹೊಂದಿದೆ. ಸಾಮಾಜಿಕ ಜಾಲತಾಣಗಳು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಅವಕಾಶ ಕೊಡಬೇಡಿ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಜಿ, “ಒಬ್ಬ ಪುರುಷ ಒಂದೇ ಮಹಿಳೆಯನ್ನು ಪದೇ ಪದೇ ಭೇಟಿಯಾದರೆ ಆತ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇರುವುದು ಸಹಜ” ಎಂದು ಹೇಳಿದ್ದಾರೆ.

‘ದೇಸಿ ಬ್ಲಿಂಗ್’ ಶೋನಲ್ಲಿ ಸತೀಶ್ ಸನ್ಪಾಲ್ ಹಲವು ಬಾರಿ ಸ್ತ್ರೀದ್ವೇಷ ಹಾಗೂ ಲೈಂಗಿಕತೆಯ ಕುರಿತ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಇನ್ನೊಂದೆಡೆ ತಬಿಂದಾ ಸನ್ಪಾಲ್ ತಮ್ಮ ಪತಿಯ ನಡೆಗೆ ಬೆಂಬಲ ವ್ಯಕ್ತಪಡಿಸುತ್ತಲೇ ಇದ್ದಾರೆ. ತಾನು ಪತಿಯನ್ನು ನಂಬುತ್ತೇನೆ ಹಾಗೂ ಪ್ರೀತಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.ಸತೀಶ್ ಸನ್ಪಾಲ್ ಇತರ ಮಹಿಳೆಯರೊಂದಿಗೆ ಪಾರ್ಟಿ ಮಾಡುವ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡರೂ, ಅವರ ಪತ್ನಿ ಸದಾ ಬೆಂಬಲವಾಗಿ ನಿಂತಿದ್ದಾರೆ. ಗಂಡನಿಗೆ ಇತರ ಮಹಿಳೆಯರೊಂದಿಗೆ ಇರುವ ಸಂಬಂಧಗಳ ಬಗ್ಗೆ ತನಗೆ ತಿಳಿದಿದೆ ಎಂದು ಕೂಡ ಅವರು ತಿಳಿಸಿದ್ದಾರೆ.