ಬಳ್ಳಾರಿ: ರಾಜ್ಯದಲ್ಲಿ ಜಾರಿಗೆ ತಂದಿರುವ ಹೊಸ ನಿಯಮವೊಂದು ಸದ್ಯ ಪಡಿತರ ಚೀಟಿದಾರರ ಪಾಲಿಗೆ ನರಕಯಾತನೆಯಾಗಿ ಪರಿಣಮಿಸಿದೆ. ತಾಂತ್ರಿಕ ದೋಷ ಹಾಗೂ ಇತರ ಕಾರಣಗಳಿಂದಾಗಿ ಮೇ ಮತ್ತು ಜೂನ್ ತಿಂಗಳ ಆಹಾರ ಧಾನ್ಯಗಳನ್ನು ಒಟ್ಟಿಗೆ ವಿತರಿಸಲು ಸರ್ಕಾರ ಮುಂದಾಗಿದ್ದು, ಇದು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಜನಸಾಮಾನ್ಯರು ಕ್ಯೂ ನಿಲ್ಲುವಂತೆ ಮಾಡಿದೆ. ಇತ್ತ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿರುವ ಪಡಿತರ ವಿತರಕರು, ಈಗ ಸರ್ಕಾರದ ವಿರುದ್ಧ ಬೀದಿಗಿಳಿಯಲು ಸಜ್ಜಾಗಿದ್ದಾರೆ. ಪ್ರಸ್ತುತ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ನೀಡುತ್ತಿರುವುದರಿಂದ, ಪ್ರತಿಯೊಬ್ಬ ಕಾರ್ಡುದಾರರು ನ್ಯಾಯಬೆಲೆ ಅಂಗಡಿಯಲ್ಲಿ ಪ್ರತ್ಯೇಕವಾಗಿ ಎರಡೆರಡು ಬಾರಿ ಹೆಬ್ಬೆಟ್ಟಿನ ಗುರುತು ನೀಡಬೇಕಾಗಿದೆ. ಈಗಾಗಲೇ ಮಂದಗತಿಯಲ್ಲಿ ಸಾಗುತ್ತಿರುವ ಸರ್ವರ್ ವ್ಯವಸ್ಥೆಯ ನಡುವೆ, ಈ ಪ್ರಕ್ರಿಯೆಯು ಪ್ರತಿಯೊಬ್ಬ ಗ್ರಾಹಕನಿಗೆ ಕನಿಷ್ಠ 15 ರಿಂದ 20 ನಿಮಿಷಗಳನ್ನು ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ.
ಇದರಿಂದಾಗಿ ಬೆಳಗಿನಿಂದ ಸಂಜೆಯವರೆಗೆ ಕಾದರೂ ಅಕ್ಕಿ ಸಿಗದೇ ಜನ ನಿತ್ಯ ಪರದಾಡುವಂತಾಗಿದೆ. ಕೆಲವೆಡೆ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ, ಗಲಾಟೆಗಳೂ ಸಂಭವಿಸಿರುವ ಉದಾಹರಣೆ ಉಂಟು. ತಿಂಗಳ ಕೊನೆಯ ವಾರಕ್ಕೆ ದಿನಗಣನೆ ಆರಂಭವಾಗಿದ್ದರೂ, ಸರ್ವರ್ ಸಮಸ್ಯೆಯಿಂದಾಗಿ ಇಷ್ಟರವರೆಗೆ ಕೇವಲ ಶೇ. 30 ರಿಂದ 40ರಷ್ಟು ಜನರಿಗೆ ಮಾತ್ರ ಪಡಿತರ ವಿತರಿಸಲು ಸಾಧ್ಯವಾಗಿದೆ. ಇಲಾಖೆಯ ಅಧಿಕಾರಿಗಳ ಪ್ರಕಾರ, ಪ್ರತಿ ತಿಂಗಳ 10ನೇ ತಾರೀಕಿನೊಳಗೆ ವಿತರಣೆ ಆರಂಭವಾಗಬೇಕಿದ್ದರೂ, ಗೋದಾಮುಗಳಿಂದ ಆಹಾರ ಧಾನ್ಯಗಳ ಎತ್ತುವಳಿ ಮತ್ತು ಪೂರೈಕೆ ವಿಳಂಬವಾಗಿ 15ನೇ ತಾರೀಕಿನ ನಂತರವೇ ವಿತರಣೆ ಚುರುಕುಕೊಳ್ಳುತ್ತದೆ. ಇದೇ ಅವಧಿಯಲ್ಲಿ ಏಕಾಏಕಿ ಎಲ್ಲರೂ ಮುಗಿಬೀಳುವುದರಿಂದ ತಾಂತ್ರಿಕ ಜಾಲದ ಮೇಲೆ ತೀವ್ರ ಒತ್ತಡ ಉಂಟಾಗುತ್ತಿದೆ.
ಹಾಗೂ ಇದರ ಜೊತೆಗೆ ಕೆಲವು ಅಂಗಡಿಗಳಲ್ಲಿ ನಿಯಮಬಾಹಿರವಾಗಿ ಮೂರ್ನಾಲ್ಕು ಕಂಪ್ಯೂಟರ್‌ಗಳನ್ನು ಒಟ್ಟಿಗೆ ಬಳಸುತ್ತಿರುವುದು ಕೂಡ ಸರ್ವರ್ ಸ್ಥಗಿತಗೊಳ್ಳಲು ಕಾರಣ ಎನ್ನಲಾಗಿದೆ. ನಿರಂತರವಾಗಿ ಎದುರಾಗುತ್ತಿರುವ ಈ ತಾಂತ್ರಿಕ ಕಂಟಕದಿಂದ ಬೇಸತ್ತಿರುವ ಸರ್ಕಾರಿ ಪಡಿತರ ವಿತರಕರ ಸಂಘವು ಮೇ 26ರಂದು ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಬೃಹತ್ ಸಭೆ ಹಮ್ಮಿಕೊಂಡಿದೆ. ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಬಳ್ಳಾರಿ ಜಿಲ್ಲಾಧ್ಯಕ್ಷ ಮೀನಳ್ಳಿ ಡಿ. ತಾಯಣ್ಣ ಮಾತನಾಡಿ, “ಕಳೆದ ಎರಡು ತಿಂಗಳುಗಳಿಂದ ಸರ್ವರ್ ಸಮಸ್ಯೆ ಮಿತಿಮೀರಿದೆ. ಸಾರ್ವಜನಿಕರು ಅಂಗಡಿಗಳ ಮುಂದೆ ಬಂದು ಗಲಾಟೆ ಮಾಡುತ್ತಿದ್ದು, ಮಾಲೀಕರು ಹಾಗೂ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಸಂಘದ ರಾಜ್ಯಾಧ್ಯಕ್ಷರು ಪ್ರತಿದಿನ ಆಯುಕ್ತರ ಕಚೇರಿಗೆ ಅಲೆದು ಮನವರಿಕೆ ಮಾಡಿಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಎನ್‌ಐಸಿ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದ್ದ ಆಯುಕ್ತರು, ತಮ್ಮ ಮಾತನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಮುಂದಿನ ಹೋರಾಟದ ಹಾದಿ ನಿರ್ಧರಿಸಲು ಎಲ್ಲಾ ತಾಲೂಕುಗಳ ಪಡಿತರ ವಿತರಕರು ಈ ಸಭೆಗೆ ಆಗಮಿಸಬೇಕು” ಎಂದು ಕರೆ ನೀಡಿದ್ದಾರೆ ಎನ್ನಲಾಗಿದೆ.


















