ರವಿಚಂದ್ರನ್ ಹಾಗೂ ಹಂಸಲೇಖ ಕನ್ನಡ ಚಿತ್ರರಂಗದ ಅದ್ಭುತ ನಟ – ಸಂಗೀತ ನಿರ್ದೇಶಕರ ಜೋಡಿ. 80, 90ರ ದಶಕದಲ್ಲಿ ರವಿಚಂದ್ರನ್ ನಟನೆಯ, ನಿರ್ದೇಶನದ ಮತ್ತು ಹಂಸಲೇಖ ಸಂಗೀತ ನಿರ್ದೇಶನದ ಚಿತ್ರಗಳು ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ. 16 ವರ್ಷಗಳ ಕಾಲ ಒಟ್ಟಾಗಿ ಈ ಜೋಡಿ ಮಾಡಿದ ಮೋಡಿಗೆ ಮನ ಸೋಲದವರಿಲ್ಲ. ಇಂಥ ದಿಗ್ಗಜ ಜೋಡಿಯ ಸಾಧನೆಯನ್ನು ಸಂಭ್ರಮಿಸುವ ಸಲುವಾಗಿ ಮೇ 30ರಂದು ಕೆಂಗೇರಿ ಬಳಿಯ ಜೆ.ಕೆ. ಗ್ರ್ಯಾಂಡ್ ಅರೆನಾದಲ್ಲಿ ಕ್ರೇಜಿ – ಬ್ರಹ್ಮ ರೀಯೂನಿಯನ್ ಮೆಗಾ ಈವೆಂಟ್ ಅನ್ನು ಆಯೋಜಿಸಲಾಗಿದೆ. ಪ್ರಸ್ತುತ್ ಇನ್ನೋವೇಟಿವ್ ಕ್ರಿಯೇಷನ್ಸ್ ಮತ್ತು ಸೊಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕ ವಿನಯ್ ಹಾಗೂ ಕಲಾಲೂಹ ಸಂಸ್ಥಾಪಕಿ ಡಾ.ಚೇತನಾ ಆರ್.ಎಸ್ ಅವರು ಈ ಅದ್ಧೂರಿ ಸಮಾರಂಭವನ್ನು ಆಯೋಜಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಮಾಧ್ಯಮಗೋಷ್ಟಿ ಆಯೋಜಿಸಲಾಗಿದ್ದು ರವಿಚಂದ್ರನ್ ಮತ್ತು ಹಂಸಲೇಖ ಜೋಡಿ 16 ವರ್ಷಗಳ ಕಾಲ ಒಟ್ಟಾಗಿ ಮಾಡಿರುವ ಕಲಾಸೇವೆಯನ್ನು ನೆನಪು ಮಾಡಿಕೊಂಡು, ಆ ಜೋಡಿಯನ್ನು ಗೌರವಿಸುವ ಸಮಾರಂಭವೇ “ಕ್ರೇಜಿ – ಬ್ರಹ್ಮ”. ಮೇ 30ರ ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 8,000 ಜನರು ಭಾಗಿಯಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಈ ಸಮಾರಂಭಕ್ಕೆ ಆಗಮಿಸಲು ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಜನ ಸಾಮಾನ್ಯರಿಗೆ ಹೊರೆ ಆಗದಂತೆ ಟಿಕೆಟ್ ದರವಿರುತ್ತದೆ. ವಿ.ಐ.ಪಿ ಟಿಕೆಟ್ಸ್ ಸಹ ಲಭ್ಯವಿರುತ್ತವೆ. ಬುಕ್ ಮೈ ಶೋನಲ್ಲಿ ಟಿಕೆಟ್ ಖರೀದಿಸಬಹುದು. ನಾಡಿನ ಹೆಸರಾಂತ ಕಲಾವಿದರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. 4 ಗಂಟೆಗಳ ವಿಶೇಷ ಕಾರ್ಯಕ್ರಮ ಇದಾಗಿದ್ದು, ರವಿಚಂದ್ರನ್ ಹಾಗೂ ಹಂಸಲೇಖ ಅವರು ಎಲ್ಲರನ್ನೂ ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರೇಕ್ಷಕರಿಗೆ ಯಾವುದೇ ತೊಂದರೆ ಆಗದಂತೆ ಪಾರ್ಕಿಂಗ್ನಿಂದ ಹಿಡಿದು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಅಂದು ರವಿಚಂದ್ರನ್ ಅವರ ಹುಟ್ಟುಹಬ್ಬವಿದ್ದು, ದಯವಿಟ್ಟು ಯಾರೂ ಕೂಡಾ ಶಾಲು, ಕೇಕ್, ಹಾರ ತರಬಾರದೆಂದು ಮನವಿ ಮಾಡುತ್ತಿದ್ದೇವೆ. ಏಕೆಂದರೆ ವೇದಿಕೆ ಮೇಲೆ ಯಾರಿಗೂ ಪ್ರವೇಶವಿರುವುದಿಲ್ಲ.
ಸಮಾರಂಭದ ಪೂರ್ವಭಾವಿಯಾಗಿ ರವಿಚಂದ್ರನ್ ಹಾಗೂ ಹಂಸಲೇಖ ಅವರ 80 ಅಡಿ ಕಟೌಟ್ ಅನಾವರಣ ಮಾಡಿದ್ದೇವೆ ಎಂದು ಸಮಾರಂಭದ ಉಸ್ತುವಾರಿ ವಹಿಸಿಕೊಂಡಿರುವ ಆಯೋಜಕ ವಿನಯ್ ತಿಳಿಸಿದರು. ನಾದಬ್ರಹ್ಮ ಹಂಸಲೇಖ ಮಾತನಾಡಿ, ”ವಿನಯ್ ಹಾಗೂ ಡಾ.ಚೇತನಾ ಅವರು ಸೇರಿ ಒಂದೊಳ್ಳೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಒಂದು ಈವೆಂಟ್. ಆದ್ರೆ ನಮ್ಮಿಬ್ಬರಿಗೆ ಇದೊಂದು ವಿದ್ಯಮಾನ. ನಮ್ಮ ಯಜಮಾನರು ಆಗ ಕನಸುಗಾರರಾಗಿದ್ದರು. ಈಗ ಒಳ್ಳೆಯ ಮಾತುಗಾರರಾಗಿದ್ದಾರೆ. ಅವರ ಕಟೌಟ್ ನೋಡಿ ನನಗೆ ಬಹಳ ಖುಷಿಯಾಯಿತು. ಪಕ್ಕದಲ್ಲೇ ನನ್ನ ಕಟೌಟ್ ಸಹ ಹಾಕಿದ್ದಾರೆ. ಅಷ್ಟೇ ಅಲ್ಲದೇ ಎರಡು ಸುಂದರವಾದ ಪ್ರೋಮೋಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಅದು ಬಹಳ ಚೆನ್ನಾಗಿದೆ. ಕಾರ್ಯಕ್ರಮ ಕೂಡಾ ಇನ್ನೂ ಚೆನ್ನಾಗಿರುತ್ತದೆ” ಎಂದು ಹೇಳಿದರು. ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ”ಕ್ರೇಜಿ ಬ್ರಹ್ಮ ಕಾರ್ಯಕ್ರಮದ ಬಗ್ಗೆ ಆಯೋಜಕರು ಹೇಳಿದಾಗ ಬಹಳ ಸಂತೋಷವಾಯಿತು. ನನ್ನ ಹಾಗೂ ಹಂಸಲೇಖ ಅವರ ಕಾಂಬಿನೇಶನ್ನಲ್ಲಿ ನೂರಾರು ಸೂಪರ್ ಹಿಟ್ ಹಾಡುಗಳು ಬಂದಿವೆ. “ಪ್ರೇಮಲೋಕದಿಂದ” ಹಿಡಿದು ಹದಿನಾರು ವರ್ಷಗಳ ಕಾಲ ನಮ್ಮಿಬ್ಬರ ಕಾಂಬಿನೇಶನನ್ನಲ್ಲಿ ಬಂದ ಹಾಡುಗಳು ಅಂದು, ಇಂದು, ಮುಂದೆಯೂ ಜನಪ್ರಿಯವಾಗಿರುತ್ತದೆ. ಆನಂತರ ನಾವು ಒಟ್ಟಾಗಿ ಸಿನಿಮಾ ಮಾಡದೇ ಇರಬಹುದು. ನನ್ನ ಮನಸ್ಸಿನಲ್ಲಿ ಅವರು, ಅವರ ಮನಸ್ಸನಲ್ಲಿ ನಾನು ಸದಾ ಇರುತ್ತೇವೆ. ಒಂದೇ ದೇಹ ಎರಡು ಜೀವ ಇದ್ದ ಹಾಗೆ. ಇನ್ನೂ ಈ ಸಮಾರಂಭ ಯಾವುದೇ ತೊಂದರೆ ಇಲ್ಲದ ಹಾಗೆ ನಡೆಯುತ್ತದೆ ಎಂಬ ಭರವಸೆ ಇದೆ. ನಾನು ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸುವುದಿಲ್ಲ. ಅವರು ಬಂದೇ ಬರುತ್ತಾರೆ ಎಂಬ ನಂಬಿಕೆ ಇದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು ಎನ್ನಲಾಗಿದೆ.


















