ಮನೆ ಸುದ್ದಿ ಜಾಲ ಹಳೆ ತಪ್ಪುಗಳಿಂದ ಎನ್‌ಟಿಎ ಪಾಠ ಕಲಿಯದಿರುವುದು ದುರದೃಷ್ಟಕರ; ಸುಪ್ರೀಂ ಕೋರ್ಟ್ ಆಕ್ರೋಶ..!

ಹಳೆ ತಪ್ಪುಗಳಿಂದ ಎನ್‌ಟಿಎ ಪಾಠ ಕಲಿಯದಿರುವುದು ದುರದೃಷ್ಟಕರ; ಸುಪ್ರೀಂ ಕೋರ್ಟ್ ಆಕ್ರೋಶ..!

0

ನವದೆಹಲಿ : NEET-UG 2026 ಪರೀಕ್ಷೆಯಲ್ಲಿ ಪೇಪರ್ ಲೀಕ್ ಆರೋಪಗಳ ನಡುವೆ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 2024ರ ಪ್ರಕರಣದಲ್ಲಿ ನೀಡಿದ ನಿರ್ದೇಶನಗಳ ಹೊರತಾಗಿಯೂ NTA ಪಾಠ ಕಲಿಯದಿರುವುದು ದುಃಖಕರ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರ ವಿಭಾಗೀಯ ಪೀಠವು ಕೇಂದ್ರ ಮತ್ತು NTAಗೆ ನೋಟಿಸ್ ಜಾರಿ ಮಾಡಿದೆ.

ಯುನೈಟೆಡ್ ಡಾಕ್ಟರ್ಸ್ ಫ್ರಂಟ್ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. NTA ಯನ್ನು ವಿಸರ್ಜನೆಗೊಳಿಸಿ, ಮುಂದಿನ ಪರೀಕ್ಷೆಯನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಮೇಲ್ವಿಚಾರಣೆ ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಿದೆ. 2024 ರಲ್ಲಿ ನೀಡಿದ ನಿರ್ದೇಶನಗಳು ಮತ್ತು ಕಮಿಟಿ ಶಿಫಾರಸುಗಳ ಅನುಸರಣೆಯ ಬಗ್ಗೆ ವಿವರಿಸಬೇಕು. ಅವುಗಳ ಅನುಷ್ಠಾನಕ್ಕೆ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ವಿವರಿಸುವ ಅಫಿಡವಿಟ್ ಸಲ್ಲಿಸಬೇಕು ಎಂದು ನ್ಯಾಯಾಲಯ ಎನ್‌ಟಿಎಗೆ ಸೂಚಿಸಿದೆ.

ಫೆಡರೇಷನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ಸಲ್ಲಿಸಿದ ಅರ್ಜಿಯಲ್ಲಿ NTAಯನ್ನು ಪುನರ್ ರಚನೆ ಮಾಡುವುದು ಅಥವಾ ಬದಲಾಯಿಸುವುದು, ಸ್ವಾಯತ್ತ ಸಂಸ್ಥೆಯನ್ನು ರಚಿಸುವುದು ಹಾಗೂ ಹೈ-ಪವರ್ಡ್ ಮಾನಿಟರಿಂಗ್ ಕಮಿಟಿ ನೇಮಕ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿವೆ. ಈ ಕಮಿಟಿಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ, ಸೈಬರ್ ಸೆಕ್ಯುರಿಟಿ ತಜ್ಞ ಮತ್ತು ಫಾರೆನ್ಸಿಕ್ ವಿಜ್ಞಾನಿ ಇರಬೇಕು ಎಂದು ಕೋರಲಾಗಿದೆ.