ಮನೆ ಅಂತಾರಾಷ್ಟ್ರೀಯ ಹಾರ್ಮುಜ್‌ನಲ್ಲಿ ಜಲಬಾಂಬ್‌ ಇಡುತ್ತಿದ್ದ ಬೋಟ್‌, ಇರಾನ್‌ ಕ್ಷಿಪಣಿ ಉಡಾವಣಾ ತಾಣಗಳ ಮೇಲೆ ವಾಯುದಾಳಿ

ಹಾರ್ಮುಜ್‌ನಲ್ಲಿ ಜಲಬಾಂಬ್‌ ಇಡುತ್ತಿದ್ದ ಬೋಟ್‌, ಇರಾನ್‌ ಕ್ಷಿಪಣಿ ಉಡಾವಣಾ ತಾಣಗಳ ಮೇಲೆ ವಾಯುದಾಳಿ

0

ಟೆಹ್ರಾನ್‌ : ಇರಾನ್‌ ಜೊತೆಗೆ ಕದನ ವಿರಾಮ ಹಾಗೂ ಸಂಘರ್ಷ ಶಮನಕ್ಕೆ ಸಂಬಂಧಿಸಿದಂತೆ ಮಾತುಕತೆ ಅಂತಿಮ ಹಂತದಲ್ಲಿ ಇರುವಾಗಲೇ ಅಮೆರಿಕ ಪಡೆಗಳು ಭೀಕರ ದಾಳಿ ನಡೆಸಿವೆ. ಇರಾನ್‌ನ ಕ್ಷಿಪಣಿ ಉಡಾವಣಾ ತಾಣಗಳು ಹಾಗೂ ಹಾರ್ಮುಜ್‌ ಜಲಸಂಧಿಯಲ್ಲಿ ಗಣಿಗಳನ್ನು ನಿಯೋಜಿಸುವ ಬೋಟ್‌ಗಳನ್ನು ಗುರಿಯಾಗಿಸಿ ಅಮೆರಿಕದ ಪಡೆಗಳು ದಾಳಿ ನಡೆಸಿವೆ. ಅಷ್ಟೇ ಅಲ್ಲ ಬಂದರ್‌ ಅಬ್ಬಾಸ್‌ನಲ್ಲೂ ಸ್ಫೋಟಗಳು ಸಂಭವಿಸಿವೆ.

ಭಾರತೀಯ ಕಾಲಮಾನ ಇಂದು (ಮಂಗಳವಾರ) ಮುಂಜಾನೆ ದಕ್ಷಿಣ ಇರಾನ್‌ನಲ್ಲಿರುವ ಇರಾನಿನ ಮಿಲಿಟರಿ ನೆಲೆಗಳು ಹಾಗೂ ಮೈನ್ಸ್‌ ನಿಯೋಜಿಸುತ್ತಿದ್ದ ಬೋಟ್‌ಗಳ ಮೇಲೆ ಅಮೆರಿಕ ಸೇನೆ ಬೃಹತ್‌ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. ಅಮೆರಿಕದ ಪಡೆಗಳು, ಯುದ್ಧನೌಕೆಗಳನ್ನು ರಕ್ಷಿಸಿಕೊಳ್ಳಲು ʻಆತ್ಮ ರಕ್ಷಣೆʼಯ ಭಾಗವಾಗಿ ನಡೆಸಿದ ದಾಳಿ ಇದಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಸಮರ್ಥಿಸಿಕೊಂಡಿದೆ.

ಇರಾನ್‌ನ ಪಡೆಗಳಿಂದ ಉಂಟಾಗುವ ಸಂಭವನೀಯ ಬೆದರಿಕೆಗಳಿಂದ ನಮ್ಮ ಸೈನಿಕರನ್ನು ರಕ್ಷಿಸಲು ಅಮೆರಿಕದ ಪಡೆಗಳು ದಕ್ಷಿಣ ಇರಾನ್‌ನಲ್ಲಿ ಆತ್ಮರಕ್ಷಣಾ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇರಾನ್‌ನ ಪಡೆಗಳು ಒಡ್ಡಿದ್ದ ಬೆದರಿಕೆಗಳನ್ನು ಯುಎಸ್‌ ಮಿಲಿಟರಿ ತಟಸ್ಥಗೊಳಿಸಿದೆ. ಪ್ರಸ್ತುತ ಕದನ ವಿರಾಮ ಸಮಯದಲ್ಲಿ ಯುಎಸ್‌ ಸಂಯಮ ಕಾಯ್ದುಕೊಳ್ಳುತ್ತಿದೆ. ಅದೇ ಸಮಯ ತನ್ನ ಪಡೆಗಳ ಸುರಕ್ಷತೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲು ಹಿಂದೆ-ಮುಂದೆ ಯೋಚಿಸಲ್ಲ ಎಂದು CENTCOM ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಎಚ್ಚರಿಕೆ ನೀಡಿದ್ದಾರೆ.

ಹಾರ್ಮುಜ್‌ ಜಲಸಂಧಿಯಲ್ಲಿ ಇರಾನ್‌ ಕ್ರಾಂತಿಕಾರಿ ಗಾರ್ಡ್‌ ಕಾರ್ಪ್ಸ್‌ ಬೋಟ್‌ಗಳು ಗಣಿಗಳನ್ನು (ಜಲಬಾಂಬ್‌) ಇಡುತ್ತಿರುವುದನ್ನು ಗಮನಿಸಿತ್ತು. ಆ ನಂತರ ಅಮೆರಿಕ ಪಡೆ ತನ್ನ ಕಾರ್ಯಾಚರಣೆ ಶುರು ಮಾಡಿತು. ಈ ದಾಳಿಯಲ್ಲಿ ಮೈನ್ಸ್‌ ನಿಯೋಜಿಸುತ್ತಿದ್ದ 2 ದೋಣಿಗಳನ್ನ ನಾಶಪಡಿಸಲಾಯಿತು ಎಂದು ಯುಎಸ್‌ ಸೇನೆ ಹೇಳಿಕೊಂಡಿದೆ. ಅಷ್ಟೇ ಅಲ್ಲದೇ ಅಮೆರಿಕದ ಫೈಟರ್‌ ಜೆಟ್‌ಗಳನ್ನ ಗುರಿಯಾಗಿಸಲು ಪ್ರಯತ್ನಿಸಿದ್ದ ಬಂದರ್‌ ಅಬ್ಬಾಸ್‌ನಲ್ಲಿರುವ ಕ್ಷಿಪಣಿ ಉಡಾವಣಾ ತಾಣಗಳ ಮೇಲೂ ಅಮೆರಿಕ ವಾಯುದಾಳಿ ನಡೆಸಿದೆ. ಪ್ರತೀಕಾರದ ದಾಳಿಯಲ್ಲಿ ಕ್ಷಿಪಣಿ ಲಾಂಚರ್ ಮತ್ತು ಸಂಬಂಧಿತ ಮಿಲಿಟರಿ ಮೂಲಸೌಕರ್ಯಗಳೆಲ್ಲವೂ ನಾಶವಾಗಿದೆ. ಮಿಸೈಲ್‌ ತಾಣಗಳಲ್ಲಿ ಸಂಭವಿಸಿದ ಸ್ಪೋಟಗಳಿಂದ ದಟ್ಟ ಹೊಗೆ ಆಕಾಶದೆತ್ತರಕ್ಕೆ ಚಿಮ್ಮಿರುವ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ದಾಳಿಯ ವ್ಯಾಪ್ತಿ ಸೀಮಿತವಾಗಿಯೇ ಇದೆ. ಇರಾನ್‌ ಜೊತೆಗಿನ ಸಂಘರ್ಷವನ್ನು ಹೆಚ್ಚಿಸುವ ಉದ್ದೇಶ ಹೊಂದಿಲ್ಲ. ಇದು ಕದನ ವಿರಾಮ ಉಲ್ಲಂಘನೆಯೂ ಅಲ್ಲ ಎಂದು ಅಮೆರಿಕ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಅಮೆರಿಕದ ಈ ದಾಳಿ ಇರಾನ್‌ನನ್ನು ಮತ್ತಷ್ಟು ಕೆರಳಿಸಿದೆ, ಹೀಗಾಗಿ ಯುದ್ಧ ಮತ್ತೆ ಶುರುವಾಗುತ್ತಾ ಎಂಬುದು ಈಗ ಕುತೂಹಲ ಹೆಚ್ಚಿಸಿದೆ. ಈ ನಡುವೆ ‘ಟ್ರುಥ್’ ಸೋಷಿಯಲ್ ಮೀಡಿಯಾದಲ್ಲಿ ಮಾರ್ಮಿಕ ಪೋಸ್ಟ್ ಹಾಕಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇರಾನ್ ಮೇಲೆ ದಾಳಿ ನಡೆಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಚಿತ್ರದಲ್ಲಿ ʻಇದು ಟ್ರಂಪ್ ನೀತಿ’ ಎಂದು ಉಲ್ಲೇಖಿಸಿದ್ದಾರೆ.