ಮನೆ ಸುದ್ದಿ ಜಾಲ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ  ಮತ್ತೆ 30 ದಿನಗಳ ಪೆರೋಲ್! 16ನೇ ಬಾರಿ ಜೈಲಿನಿಂದ ಬಿಡುಗಡೆ!

ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ  ಮತ್ತೆ 30 ದಿನಗಳ ಪೆರೋಲ್! 16ನೇ ಬಾರಿ ಜೈಲಿನಿಂದ ಬಿಡುಗಡೆ!

0

ನವದೆಹಲಿ: ಕೊಲೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಮತ್ತೊಮ್ಮೆ 30 ದಿನಗಳ ಪೆರೋಲ್ ಮಂಜೂರಾಗಿದೆ.

ತನ್ನ ಇಬ್ಬರು ಮಹಿಳಾ ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್, ಮಂಗಳವಾರ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ 30 ದಿನಗಳ ಪೆರೋಲ್ ಮೇಲೆ ಹೊರಬರಲಿದ್ದಾನೆ. 2017ರ ಆಗಸ್ಟ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಬಳಿಕ ಆತ 16ನೇ ಬಾರಿ ಜೈಲಿನಿಂದ ಹೊರಬರುತ್ತಿರುವುದು ಗಮನ ಸೆಳೆಯುತ್ತಿದೆ.

ಪೆರೋಲ್ ಹಿನ್ನೆಲೆ ಜೈಲು ಆವರಣದ ಬಳಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹೆಚ್ಚುವರಿ ಭದ್ರತೆ ಕೈಗೊಂಡಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಪೆರೋಲ್ ಅವಧಿಯಲ್ಲಿ ರಾಮ್ ರಹೀಮ್ ಸಿಂಗ್ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌಧ ಕೇಂದ್ರದಲ್ಲೇ ವಾಸ್ತವ್ಯ ಹೂಡಲಿದ್ದಾನೆ. ಅನುಯಾಯಿಗಳ ಸಮಾವೇಶಕ್ಕೆ ಅನುಮತಿ ನೀಡದಿದ್ದರೂ, ವರ್ಚುವಲ್ ಮೂಲಕ ಸಂದೇಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದಕ್ಕೂ ಮೊದಲು ರಾಮ್ ರಹೀಮ್ ಸಿಂಗ್ ಜನವರಿ 5 ರಂದು 40 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಅದರ ಹಿಂದೆಯೂ 2025ರ ಆಗಸ್ಟ್ 5 ರಂದು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 40 ದಿನಗಳ ಪೆರೋಲ್ ಪಡೆದಿದ್ದನು.

2025ರ ಏಪ್ರಿಲ್ ತಿಂಗಳಲ್ಲಿ 21 ದಿನಗಳ ಫರ್ಲೋ ನೀಡಲಾಗಿತ್ತು. ಅದಕ್ಕೂ ಮೊದಲು 2025ರ ಜನವರಿಯಲ್ಲಿ ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನ 30 ದಿನಗಳ ಪೆರೋಲ್ ಮೇಲೆ ಬಿಡುಗಡೆಗೊಂಡು ಸಿರ್ಸಾ ಡೇರಾ ಕೇಂದ್ರದಲ್ಲಿ ತಂಗಿದ್ದ. ಹಿಂದಿನ ಹಲವು ಸಂದರ್ಭಗಳಲ್ಲಿ ಆತ ಉತ್ತರ ಪ್ರದೇಶದ ಬಾಗ್ಪತ್ ಆಶ್ರಮದಲ್ಲೂ ವಾಸ್ತವ್ಯ ಹೂಡಿದ್ದನು.

2017ರ ಆಗಸ್ಟ್‌ನಲ್ಲಿ ಪಂಚಕುಲದ ಸಿಬಿಐ ನ್ಯಾಯಾಲಯವು ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ದೋಷಿ ಎಂದು ಘೋಷಿಸಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜೊತೆಗೆ ಸಂತ್ರಸ್ತೆಯರಿಗೆ ತಲಾ 15 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು.ತೀರ್ಪಿನ ನಂತರ ರಾಮ್ ರಹೀಮ್ ಬೆಂಬಲಿಗರು ಹಿಂಸಾಚಾರ ನಡೆಸಿದ್ದು, ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಪಂಚಕುಲ ಹಾಗೂ ಸಿರ್ಸಾದಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಬಳಿಕ ಹೆಲಿಕಾಪ್ಟರ್ ಮೂಲಕ ಆತನನ್ನು ಪಂಚಕುಲದಿಂದ ರೋಹ್ಟಕ್‌ನ ಸುನಾರಿಯಾ ಜೈಲಿಗೆ ಕರೆದೊಯ್ಯಲಾಗಿತ್ತು.

ಗುರ್ಮೀತ್ ರಾಮ್ ರಹೀಮ್ ಸಿಂಗ್ ಮೊದಲ ಬಾರಿಗೆ 2020ರ ಅಕ್ಟೋಬರ್ 24 ರಂದು ಒಂದು ದಿನದ ಪೆರೋಲ್ ಮೇಲೆ ಹೊರಬಂದಿದ್ದ. ನಂತರ 2021ರ ಮೇ 21 ರಂದು ಅಸ್ವಸ್ಥ ತಾಯಿಯನ್ನು ಭೇಟಿಯಾಗಲು 12 ಗಂಟೆಗಳ ಪೆರೋಲ್ ನೀಡಲಾಗಿತ್ತು. ಬಳಿಕ ಫೆಬ್ರವರಿ 2022ರಲ್ಲಿ 21 ದಿನಗಳ ಫರ್ಲೋ, ಜೂನ್ 2022ರಲ್ಲಿ 30 ದಿನಗಳ ಪೆರೋಲ್, ಅಕ್ಟೋಬರ್ 2022ರಲ್ಲಿ 40 ದಿನಗಳ ಪೆರೋಲ್ ನೀಡಲಾಗಿತ್ತು.ಇದೇ ರೀತಿ ಜನವರಿ 2023ರಲ್ಲಿ 40 ದಿನಗಳ ಪೆರೋಲ್, ಜುಲೈ 2023ರಲ್ಲಿ 30 ದಿನಗಳ ಪೆರೋಲ್, ನವೆಂಬರ್ 2023ರಲ್ಲಿ 21 ದಿನಗಳ ಫರ್ಲೋ, ಜನವರಿ 2024ರಲ್ಲಿ 50 ದಿನಗಳ ಫರ್ಲೋ, ಆಗಸ್ಟ್ 2024ರಲ್ಲಿ 21 ದಿನಗಳ ಫರ್ಲೋ, ಅಕ್ಟೋಬರ್ 2024ರಲ್ಲಿ 20 ದಿನಗಳ ಪೆರೋಲ್, ಜನವರಿ 2025ರಲ್ಲಿ 30 ದಿನಗಳ ಪೆರೋಲ್, ಏಪ್ರಿಲ್ 2025ರಲ್ಲಿ 21 ದಿನಗಳ ಫರ್ಲೋ ಹಾಗೂ ಆಗಸ್ಟ್ 2025ರಲ್ಲಿ 40 ದಿನಗಳ ಪೆರೋಲ್ ನೀಡಲಾಗಿತ್ತು.

2025ರ ಮಾರ್ಚ್‌ನಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಖುಲಾಸೆಗೊಳಿಸಿತು.ಇನ್ನೂ 2024ರ ಮೇ ತಿಂಗಳಲ್ಲಿ ಮಾಜಿ ಡೇರಾ ವ್ಯವಸ್ಥಾಪಕ ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲೂ ರಾಮ್ ರಹೀಮ್ ಸಿಂಗ್ ಸೇರಿದಂತೆ ಐವರು ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. ತನಿಖೆಯಲ್ಲಿದ್ದ ಹಲವು ನ್ಯೂನತೆಗಳನ್ನು ಕೋರ್ಟ್ ಉಲ್ಲೇಖಿಸಿತ್ತು.

ಪ್ರಸ್ತುತ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್, ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತಲಾ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. 2017ರಲ್ಲಿ ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯವು ಆತನ ವಿರುದ್ಧ ತೀರ್ಪು ನೀಡಿತ್ತು.