ಆಪಲ್ ಕಂಪನಿಯು ಇದೀಗ ತನ್ನ ಮುಂದಿನ ಐಫೋನ್ ಸರಣಿಯಲ್ಲಿ ದೊಡ್ಡ ಬದಲಾವಣೆಯೊಂದನ್ನು ತರಲು ಸಜ್ಜಾಗಿದೆ. ಐಫೋನ್ 18ರ ಬಳಿಕ ಸೀದಾ ಐಫೋನ್ 20ನ್ನು ಲಾಂಚ್ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ ಐಫೋನ್ 19 ಯಾಕೆ ಸಿಗಲ್ಲ ಎಂಬ ಪ್ರಶ್ನೆಯೂ ಎದ್ದಿದೆ.
ಆಪಲ್ ಕಂಪನಿಯು ಐಫೋನ್ 19ರ ಆವೃತ್ತಿಯನ್ನು ಸಂಪೂರ್ಣವಾಗಿ ಕೈಬಿಟ್ಟು, ನೇರವಾಗಿ ಐಫೋನ್ 20 ಅನ್ನು ಮಾರುಕಟ್ಟೆಗೆ ಪರಿಚಯಿಸಲು ಯೋಜಿಸುತ್ತಿದೆ. ಐಫೋನ್ ಬಿಡುಗಡೆಯಾಗಿ 20 ವರ್ಷ ಪೂರ್ಣಗೊಳ್ಳಲಿರುವ ಈ ಐತಿಹಾಸಿಕ ಸಂದರ್ಭವನ್ನು ಸ್ಮರಣೀಯವಾಗಿಸಲು ತನ್ನ ಫೋನ್ಗಳ ಲಾಂಚ್ನಲ್ಲಿ ಹೊಸತನ ತರಲು ಆಪಲ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
2017ರಲ್ಲಿ 10ನೇ ವರ್ಷದ ಸಂಭ್ರಮಾಚರಣೆ ವೇಳೆ ಆಪಲ್ ಕಂಪನಿಯು ಐಫೋನ್ 9ನ್ನು ಸ್ಕಿಪ್ ಮಾಡಿ, ಐಫೋನ್ 8ರ ಸರಣಿಯ ಜೊತೆಗೆ ಐಫೋನ್ 10ರ ಸರಣಿಯನ್ನು ಲಾಂಚ್ ಮಾಡಿತ್ತು. 2027ರ ಮೊದಲಾರ್ಧದಲ್ಲಿ ಆಪಲ್ ಐಫೋನ್ 18e ಮತ್ತು ಐಫೋನ್ 18 ಸರಣಿಯನ್ನು ಬಿಡುಗಡೆ ಮಾಡಲಿದ್ದು, ಬಳಿಕ 2027ರ ದ್ವಿತೀಯಾರ್ಧದಲ್ಲಿ ಐಫೋನ್ ಏರ್, ಐಫೋನ್ 20 ಪ್ರೋ, ಐಫೋನ್ 20 ಪ್ರೋ ಮ್ಯಾಕ್ಸ್ ಲಾಂಚ್ ಆಗಲಿವೆ ಎಂದು ಮೂಲಗಳು ತಿಳಿಸಿವೆ.
ಹೆಸರಿನ ಬದಲಾವಣೆ ಮಾತ್ರವಲ್ಲದೆ, ಆಪಲ್ ತನ್ನ ಸಾಂಪ್ರದಾಯಿಕ ಬಿಡುಗಡೆಯ ಕ್ಯಾಲೆಂಡರ್ ಅನ್ನು ಸಹ ಬದಲಾಯಿಸಲು ಯೋಚಿಸುತ್ತಿದೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಮಾತ್ರ ಹೊಸ ಐಫೋನ್ಗಳನ್ನು ಬಿಡುಗಡೆ ಮಾಡುತ್ತಿದ್ದ ಆಪಲ್, ಇನ್ಮುಂದೆ ವರ್ಷಕ್ಕೆ ಎರಡು ಬಾರಿ ಅಂದರೆ ವರ್ಷದ ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಹಂತಹಂತವಾಗಿ ಮಾರುಕಟ್ಟೆಗೆ ಪರಿಚಯಿಸಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.


















