ಮನೆ ಜ್ಯೋತಿಷ್ಯ ಸಿದ್ದರಾಮಯ್ಯ ರಾಜಯೋಗ ಅಂತ್ಯ?: ಮುಂದಿನ 8 ವರ್ಷ ಡಿಕೆಶಿ ಅಧಿಕಾರಕ್ಕೆ ಧಕ್ಕೆಯೇ ಇಲ್ಲ ಎಂದ ರಾಜಗುರು!

ಸಿದ್ದರಾಮಯ್ಯ ರಾಜಯೋಗ ಅಂತ್ಯ?: ಮುಂದಿನ 8 ವರ್ಷ ಡಿಕೆಶಿ ಅಧಿಕಾರಕ್ಕೆ ಧಕ್ಕೆಯೇ ಇಲ್ಲ ಎಂದ ರಾಜಗುರು!

0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಗರಿಗೆದರಿರುವ ನಡುವೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಗ್ಗೆ ರಾಜಗುರು ದ್ವಾರಕನಾಥ್ ಗುರೂಜಿ ಹೊಸ ಭವಿಷ್ಯವಾಣಿ ಮಾಡಿದ್ದಾರೆ. ಸೋಮವಾರದೊಳಗೆ ಡಿ.ಕೆ. ಶಿವಕುಮಾರ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಮುಂದಿನ 8 ವರ್ಷಗಳ ಕಾಲ ಅವರ ಅಧಿಕಾರವನ್ನು ಯಾರಿಂದಲೂ ಕದಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಗುರೂಜಿ, ಡಿ.ಕೆ. ಶಿವಕುಮಾರ್ ಜೊತೆಗಿನ ತಮ್ಮ 35 ವರ್ಷದ ನಂಟನ್ನು ಸ್ಮರಿಸಿದರು. “ಅವನು ನನಗೆ ಕಳೆದ 35 ವರ್ಷಗಳಿಂದ ಪರಿಚಿತ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸಚಿವ ಸಂಪುಟದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಸಚಿವನಾಗಿದ್ದಾಗಲೇ, ‘ಒಂದು ದಿನ ನೀನು ಈ ರಾಜ್ಯದ ಮುಖ್ಯಮಂತ್ರಿ ಆಗುತ್ತೀಯ’ ಎಂದು ಹೇಳಿದ್ದೆ. ಅವನು ಸದಾ ನನ್ನ ಸಂಪರ್ಕದಲ್ಲಿದ್ದಾನೆ. ಮನೆಯ ಮಗನಂತೆ ಇದ್ದಾನೆ” ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾತಕದ ಕುರಿತು ಮಾತನಾಡಿದ ಗುರೂಜಿ, “ಸಿದ್ದರಾಮಯ್ಯ ವೃಶ್ಚಿಕ ರಾಶಿಯವರು. ಸದ್ಯ ಅವರಿಗೆ ಗುರು ಬಲ ಹಾಗೂ ಶನಿ ಬಲ ಸಹಕಾರ ನೀಡುತ್ತಿಲ್ಲ. ಆದರೂ ರಾಜ್ಯಕ್ಕೆ ಅವರ ಅನುಭವ ಮತ್ತು ಮಾರ್ಗದರ್ಶನ ಇನ್ನೂ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

ಡಿ.ಕೆ. ಶಿವಕುಮಾರ್ ಅವರಿಗೆ ಈಗ ಅತ್ಯಂತ ಶುಭ ಕಾಲ ಆರಂಭವಾಗಿದೆ ಎಂದು ಹೇಳಿದ ಅವರು, “ಗುರು ಮಿಥುನ ರಾಶಿಯಲ್ಲಿ ಇರುವುದರಿಂದ ಡಿ.ಕೆ. ಅವರಿಗೆ ದೊಡ್ಡ ಮಟ್ಟದ ರಾಜಯೋಗ ಒಲಿದಿದೆ” ಎಂದು ಹೇಳಿದರು.

“ಡಿ.ಕೆ. ಶಿವಕುಮಾರ್ ಕೇವಲ ರಾಜಕಾರಣಿ ಅಲ್ಲ, ಅವರು ಒಂದು ಬ್ರ್ಯಾಂಡ್. ಬುದ್ಧಿವಂತಿಕೆ, ತಾಳ್ಮೆ ಮತ್ತು ರಾಜಕೀಯ ಚಾಣಾಕ್ಷತನ ಅವರ ದೊಡ್ಡ ಶಕ್ತಿ” ಎಂದು ಗುರೂಜಿ ಹೊಗಳಿದರು. ಹೊಸ ವರ್ಷದೊಳಗೆಲೇ ಅವರು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಅದು ತಡವಾಯಿತು ಎಂದರು.

ಅದರಿಗಾಗಿ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ್ದಾಗಿ ತಿಳಿಸಿದ ಗುರೂಜಿ, “ನಾನು ಶೃಂಗೇರಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ವೇಳೆ ಸ್ವತಃ ಡಿ.ಕೆ. ಶಿವಕುಮಾರ್ ಕರೆ ಮಾಡಿ ‘ಗುರೂಜಿ, ಕೆಲಸ ಆಗಿದೆ’ ಎಂದು ತಿಳಿಸಿದರು. ಈಗ ನಾನು ಬೆಂಗಳೂರಿಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಸೋಮವಾರದೊಳಗೆ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ” ಎಂದು ಹೇಳಿದರು.