ಕನ್ನಡದ ನಟಿಯರು ತಮ್ಮ ಪ್ರತಿಭೆ, ಸೌಂದರ್ಯದಿಂದಾಗಿ ಪರಭಾಷೆಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಈಗಾಗಲೇ ಸ್ಟಾರ್ ಪ್ಯಾನ್ ಇಂಡಿಯಾ ನಟಿ ಆಗಿದ್ದಾರೆ. ಕನ್ನಡತಿ ಶ್ರೀಲೀಲಾ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ದಾಪುಗಾಲಿಟ್ಟಿದ್ದಾರೆ. ಶ್ರದ್ಧಾ ಶ್ರೀನಾಥ್, ಶ್ರೀನಿಧಿ ಶೆಟ್ಟಿ ಇನ್ನೂ ಕೆಲವರು ಸಹ ಪರಭಾಷೆಗಳಲ್ಲಿ ಬಹಳ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದು, ಗಮನ ಸೆಳೆಯುತ್ತಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಮೂಲಕ ತಮ್ಮ ಪ್ರತಿಭೆಯ ಅನಾವರಣ ಮಾಡಿದ ರುಕ್ಮಿಣಿ ವಸಂತ್ ಸಹ ಇದೀಗ ಪ್ಯಾನ್ ಇಂಡಿಯಾ ನಟಿಯಾಗುವ ಹಂತದಲ್ಲಿದ್ದಾರೆ. ಈಗಾಗಲೇ ಕನ್ನಡದ ಹೊರತಾಗಿ ಕೆಲ ಪರಭಾಷೆ ಸಿನಿಮಾಗಳಲ್ಲಿಯೂ ನಟಿಸಿರುವ ರುಕ್ಮಿಣಿ ವಸಂತ್, ಇದೀಗ ತಮಿಳಿನ ಸ್ಟಾರ್ ನಟರೊಬ್ಬರ 50ನೇ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎಂಬುದ್ದಾಗಿದೆ.
ಈಗಾಗಲೆ ತೆಲುಗಿನ ಜೂ ಎನ್ಟಿಆರ್ ಜೊತೆಗೆ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿರುವ ರುಕ್ಮಿಣಿ ವಸಂತ್, ಇದೀಗ ತಮಿಳಿನ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಬಾಚಿಕೊಂಡಿದ್ದಾರೆ. ತಮಿಳಿನ ಸ್ಟಾರ್ ನಟ ಸೂರ್ಯ ನಟನೆಯ ‘ಕರುಪ್ಪು’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಅವರು ತಮ್ಮ 50ನೇ ಸಿನಿಮಾದ ತಯಾರಿಯಲ್ಲಿದ್ದಾರೆ. ವೃತ್ತಿ ಜೀವನದ 50ನೇ ಸಿನಿಮಾ ಆಗಿರುವ ಕಾರಣಕ್ಕೆ ಸಿನಿಮಾ ವಿಶೇಷವಾಗಿರಬೇಕು ಎಂಬ ಕಾಳಜಿ ಸೂರ್ಯ ಅವರಿಗಿದ್ದು, ವಿಶೇಷ ಕತೆಯೊಂದನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ಕೆವಿಎನ್ ಪ್ರೊಡಕ್ಷನ್ಸ್. ಸೂರ್ಯ ಅವರ 50ನೇ ಸಿನಿಮಾಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸೂರ್ಯ ನಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ ‘24’ ನಿರ್ದೇಶಿಸಿದ್ದ ವಿಕ್ರಂ ಅವರೇ ಸೂರ್ಯ ಅವರ 50ನೇ ಸಿನಿಮಾ ನಿರ್ದೇಶಿಸಲಿದ್ದು, ಈ ಸಿನಿಮಾನಲ್ಲಿ ವಿಲನ್ ಆಗಿ ಬಾಲಿವುಡ್ ನಟ ಅಕ್ಷಯ್ ಖನ್ನಾ ನಟಿಸಲಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಲಿದ್ದು, ಕೆವಿಎನ್ ಪ್ರೊಡಕ್ಷನ್ಸ್ನವರು ಭಾರಿ ಬಜೆಟ್ ಹಾಕಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಶೀಘ್ರವೇ ಈ ಸಿನಿಮಾದ ಅಧಿಕೃತ ಘೋಷಣೆ ಹೊರಬೀಳಲಿದ್ದು, ಸಿನಿಮಾದ ಚಿತ್ರೀಕರಣವೂ ಶುರುವಾಗಲಿದೆ ಎಂದು ತಿಳಿದುಬಂದಿದೆ.


















