ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಖಾಸಗಿ ಕ್ಲಬ್ನ ಕಾಂಪೌಂಡ್ ಗೋಡೆ ಕುಸಿದು 46 ವರ್ಷದ ಆಟೋರಿಕ್ಷಾ ಚಾಲಕ ಸಾವನ್ನಪ್ಪಿರುವ ಘಟನೆ ವಿಜಯನಗರ ಪ್ರದೇಶದಲ್ಲಿ ಜರುಗಿದೆ. ಮೃತ ಚಾಲಕನನ್ನು ಗಂಗೊಂಡನಹಳ್ಳಿಯ ನಿವಾಸಿ ಶಿವಬೋರಯ್ಯ (46) ಎಂದು ಗುರುತಿಸಲಾಗಿದೆ. ಹಠಾತ್ ಮಳೆ ಬಂದಾಗ ಗಂಗಬೋರಯ್ಯ ವಿಜಯನಗರದ ಕ್ಲಬ್ವೊಂದರ ಕಾಂಪೌಂಡ್ ಗೋಡೆಯ ಬಳಿ ತಮ್ಮ ಆಟೋರಿಕ್ಷಾವನ್ನು ನಿಲ್ಲಿಸಿಕೊಂಡಿದ್ದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಿ ಮೂಲತಃ ಮಂಡ್ಯ ಜಿಲ್ಲೆಯ ಶಿವಬೋರಯ್ಯ 35 ವರ್ಷಗಳಿಂದ ಅತ್ತಿಗುಪ್ಪೆಯಲ್ಲಿ ವಾಸವಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಶುಕ್ರವಾರ ಆಸ್ಪತ್ರೆಗೆ ಕರೆದೊಯ್ದಿದ್ದರು. ತಾಯಿ ಹಾಗೂ ಸಹೋದರಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ತಾವು ಊಟ ಮಾಡಲು ಬಂದಾಗ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.
ಮಳೆ ಕಡಿಮೆಯಾಗಲೆಂದು ಆಟೋದಲ್ಲಿ ಕುಳಿತು ಕಾಯುತ್ತಿದ್ದಾಗ, ನಿರಂತರ ಮಳೆಯಿಂದ ದುರ್ಬಲಗೊಂಡಿದ್ದ ಕಾಂಪೌಂಡ್ ಗೋಡೆ ಇದ್ದಕ್ಕಿದ್ದಂತೆ ಆಟೋರಿಕ್ಷಾದ ಮೇಲೆ ಕುಸಿದು ಬಿದ್ದಿದೆ ಎಂದು ತಿಳಿದುಬಂದಿದೆ. ವಾಹನವು ಅವಶೇಷಗಳ ಅಡಿ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಚಾಲಕನಿಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.


















