ಮಂಗಳೂರು(ದಕ್ಷಿಣ ಕನ್ನಡ): ಕಡಲಿನ ಅಲೆಗಳು ಒಂದೆಡೆ ದಡಕ್ಕೆ ಅಪ್ಪಳಿಸುತ್ತಿದ್ದರೆ, ಮತ್ತೊಂದೆಡೆ ಅದೇ ಅಲೆಗಳನ್ನು ಸವಾಲಾಗಿ ಸ್ವೀಕರಿಸಿದ ಯುವಕ, ಯುವತಿಯರು ಬೋರ್ಡ್ಗಳ ಮೇಲೆ ನಿಂತು ಸಾಹಸ ಪ್ರದರ್ಶಿಸುತ್ತಿದ್ದಾರೆ. ಇದು ಮಂಗಳೂರಿನ ತಣ್ಣೀರುಬಾವಿಯ ಬ್ಲೂ ಫ್ಲಾಗ್ ಬೀಚ್ನಲ್ಲಿ ನಡೆಯುತ್ತಿರುವ 7ನೇ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಡ ದೃಶ್ಯ. ಕರ್ನಾಟಕ, ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸರ್ಫರ್ಗಳು ಅಲೆಗಳ ಮೇಲೆ ತಮ್ಮ ಕೌಶಲ್ಯ ಪ್ರದರ್ಶಿಸುತ್ತಿದ್ದು, ಕರಾವಳಿಯ ಈ ಬೀಚ್ ರೋಚಕ ಕ್ರೀಡಾ ವೇದಿಕೆಯಾಗಿ ಮಾರ್ಪಟ್ಟಿದೆ. 2016ರಲ್ಲಿ ಆರಂಭವಾದ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಇದೀಗ ತನ್ನ ಏಳನೇ ಆವೃತ್ತಿಗೆ ಕಾಲಿಟ್ಟಿದೆ ಎನ್ನಲಾಗುತ್ತಿದೆ.
ಈ ಬಾರಿ ನಡೆಯುತ್ತಿರುವ ಸ್ಪರ್ಧೆ ಕೇವಲ ರಾಷ್ಟ್ರೀಯ ಚಾಂಪಿಯನ್ಶಿಪ್ ಮಾತ್ರವಲ್ಲ, ಏಷ್ಯನ್ ಗೇಮ್ಸ್ಗೆ ಭಾರತದ ಪರ ಆಯ್ಕೆಯಾಗಲಿರುವ ಸರ್ಫರ್ಗಳನ್ನು ಗುರುತಿಸುವ ಮಹತ್ವದ ವೇದಿಕೆಯೂ ಆಗಿದೆ. ಇದೇ ಕಾರಣಕ್ಕೆ ದೇಶದ ಪ್ರಮುಖ ಸರ್ಫರ್ಗಳ ಗಮನ ಮಂಗಳೂರಿನತ್ತ ನೆಟ್ಟಿದೆ. ಭಾರತದಲ್ಲಿ ಸರ್ಫಿಂಗ್ ಇನ್ನೂ ಹೊಸ ಕ್ರೀಡೆ ಎನ್ನಬಹುದು. ಆದರೆ, ಜಾಗತಿಕ ಮಟ್ಟದಲ್ಲಿ ಇದು ಅತ್ಯಂತ ಜನಪ್ರಿಯ ಜಲಸಾಹಸ ಕ್ರೀಡೆಗಳಲ್ಲಿ ಒಂದಾಗಿದೆ. ಸಮುದ್ರದ ಅಲೆಗಳ ಮೇಲೆ ವಿಶೇಷ ಬೋರ್ಡ್ ಬಳಸಿ ಸವಾರಿ ನಡೆಸುವುದೇ ಸರ್ಫಿಂಗ್. ಅಲೆಗಳ ಶಕ್ತಿ, ದಿಕ್ಕು ಮತ್ತು ವೇಗವನ್ನು ಅರ್ಥಮಾಡಿಕೊಂಡು ಅದರೊಂದಿಗೆ ಹೊಂದಾಣಿಕೆ ಸಾಧಿಸುತ್ತಾ ಬೋರ್ಡ್ ಮೇಲೆ ಸಮತೋಲನ ಕಾಯ್ದುಕೊಂಡು ವಿವಿಧ ಸಾಹಸಮಯ ಚಲನೆಗಳನ್ನು ಪ್ರದರ್ಶಿಸುವುದು ಈ ಕ್ರೀಡೆಯ ವಿಶೇಷತೆ. ಹೊರಗಿನಿಂದ ನೋಡಲು ಸುಲಭವೆನಿಸಿದರೂ ಸರ್ಫಿಂಗ್ಗೆ ಅಪಾರ ದೈಹಿಕ ಸಾಮರ್ಥ್ಯ, ತಾಳ್ಮೆ, ತಾಂತ್ರಿಕ ಕೌಶಲ್ಯ ಮತ್ತು ಸಮುದ್ರದ ಸ್ವಭಾವದ ಬಗ್ಗೆ ಆಳವಾದ ಅರಿವು ಅಗತ್ಯವಿದೆ. ಸರ್ಫಿಂಗ್ನ ಇತಿಹಾಸ ಹವಾಯಿ ದ್ವೀಪಗಳಿಗೆ ಹೋಗಿ ಸೇರುತ್ತದೆ. ಅಲ್ಲಿಂದ ವಿಶ್ವದ ವಿವಿಧ ದೇಶಗಳಿಗೆ ವಿಸ್ತರಿಸಿದ ಈ ಕ್ರೀಡೆ ಇಂದು ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ಗಳಂತಹ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲೂ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿಯೂ ಕಳೆದ ಒಂದು ದಶಕದಲ್ಲಿ ಸರ್ಫಿಂಗ್ ವೇಗವಾಗಿ ಬೆಳೆಯುತ್ತಿದ್ದು, ಕರಾವಳಿ ರಾಜ್ಯಗಳ ಯುವಕರು ಈ ಕ್ರೀಡೆಯತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಸರ್ಫಿಂಗ್ ಸ್ಪರ್ಧೆಯಲ್ಲಿ ಅಂಕಗಳನ್ನು ನೀಡುವ ವಿಧಾನವೂ ವಿಶಿಷ್ಟವಾಗಿದೆ. ಸ್ಪರ್ಧಾಳುಗಳು ಅಲೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಮೇಲೆ ಸವಾರಿ ನಡೆಸುತ್ತಾರೆ. ಪ್ರತಿಯೊಂದು ಅಲೆಯ ಗುಣಮಟ್ಟ, ಅದರ ಗಾತ್ರ, ಅಲೆಯೊಂದಿಗೆ ಸ್ಪರ್ಧಾಳು ತೋರುವ ನಿಯಂತ್ರಣ, ವೇಗ ಮತ್ತು ಸಾಹಸಮಯ ಚಲನೆಗಳನ್ನು ತೀರ್ಪುಗಾರರು ಮೌಲ್ಯಮಾಪನ ಮಾಡುತ್ತಾರೆ. ಸಾಮಾನ್ಯವಾಗಿ ನಾಲ್ವರು ತೀರ್ಪುಗಾರರ ತಂಡ ಸ್ಪರ್ಧಾಳುಗಳ ಪ್ರದರ್ಶನವನ್ನು ಗಮನಿಸುತ್ತದೆ ಎನ್ನಬಹುದು.
ಹಾಗೇ ಅಲೆಯ ಮೇಲೆ ನಡೆಸುವ ‘ಟರ್ನ್’, ‘ಸ್ನ್ಯಾಪ್’, ‘ಕಟ್ಬ್ಯಾಕ್’ ಮುಂತಾದ ಕೌಶಲ್ಯಗಳಿಗೆ ಅಂಕಗಳು ದೊರೆಯುತ್ತವೆ. ಅದರಲ್ಲೂ ‘ಏರಿಯಲ್’ ಎಂಬ ಸಾಹಸಮಯ ಚಲನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಲೆಯ ಮೇಲಿಂದ ಗಾಳಿಗೆ ಹಾರಿಬಂದು ಮತ್ತೆ ಬೋರ್ಡ್ ಮೇಲೆ ಸುರಕ್ಷಿತವಾಗಿ ಇಳಿದು ಸವಾರಿಯನ್ನು ಮುಂದುವರಿಸಿದರೆ ಹೆಚ್ಚಿನ ಅಂಕಗಳನ್ನು ಗಳಿಸಬಹುದು. ಅಲೆಯ ಆರಂಭದಿಂದ ಅಂತ್ಯದವರೆಗೆ ಸ್ಪರ್ಧಾಳು ತೋರುವ ಆತ್ಮವಿಶ್ವಾಸ, ಶೈಲಿ ಹಾಗೂ ನಿಯಂತ್ರಣವೂ ಅಂಕ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಬಾರಿಯ ಸ್ಪರ್ಧೆಯ ಮತ್ತೊಂದು ವಿಶೇಷ ಕಿರಿಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿರುವುದು. ಅಂಡರ್-14 ಬಾಲಕ ಮತ್ತು ಬಾಲಕಿಯರು, ಅಂಡರ್-16 ಬಾಲಕ ಮತ್ತು ಬಾಲಕಿಯರು, ಅಂಡರ್-18 ಬಾಲಕ ಮತ್ತು ಬಾಲಕಿಯರು, ಓಪನ್ ಮೆನ್ ಹಾಗೂ ಓಪನ್ ವುಮನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಹಿಂದಿನ ಆವೃತ್ತಿಗಳಲ್ಲಿ ಕಡಿಮೆ ವಿಭಾಗಗಳಿದ್ದರೆ, ಈ ಬಾರಿ ಮೂರು ಪ್ರತ್ಯೇಕ ಜೂನಿಯರ್ ವಿಭಾಗಗಳನ್ನು ಪರಿಚಯಿಸುವ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಪ್ರಯತ್ನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸ್ಪರ್ಧೆಯು ಕೇವಲ ಪದಕಗಳಿಗಾಗಿ ನಡೆಯುವ ಕ್ರೀಡಾಕೂಟವಲ್ಲ. ದೇಶದ ವಿವಿಧ ಭಾಗಗಳ ಸರ್ಫರ್ಗಳು ಒಂದೆಡೆ ಸೇರಿ ಅನುಭವ ಹಂಚಿಕೊಳ್ಳುವ, ಹೊಸ ಸ್ನೇಹಗಳನ್ನು ಬೆಳೆಸುವ ಮತ್ತು ಸರ್ಫಿಂಗ್ ಸಂಸ್ಕೃತಿಯನ್ನು ಆಚರಿಸುವ ವೇದಿಕೆಯಾಗಿಯೂ ಇದು ರೂಪುಗೊಂಡಿದೆ. ಚೆನ್ನೈ, ಮಹಾಬಲಿಪುರಂ, ಕೇರಳ, ಗೋವಾ ಸೇರಿದಂತೆ ವಿವಿಧ ಕರಾವಳಿ ಪ್ರದೇಶಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಈ ಸ್ಪರ್ಧೆಯನ್ನು ಸರ್ಫಿಂಗ್ ಸಮುದಾಯದ ವಾರ್ಷಿಕ ಹಬ್ಬ ಎಂದೇ ಪರಿಗಣಿಸುತ್ತಾರೆ. ಕಳೆದ 2016ರಲ್ಲಿ ಆರಂಭವಾದ ಈ ಸ್ಪರ್ಧೆ ಈಗ ಏಳನೇ ಆವೃತ್ತಿಗೆ ಬಂದಿದೆ. ಇದು ಕೇವಲ ಸ್ಪರ್ಧೆ ಅಲ್ಲ, ಭಾರತದ ಸರ್ಫಿಂಗ್ ಸಮುದಾಯದ ಹಬ್ಬವಾಗಿದೆ.
ಆದರಿಂದ ದೇಶದ ವಿವಿಧ ಭಾಗಗಳಿಂದ ಸರ್ಫರ್ಗಳು ಇಲ್ಲಿ ಬಂದು ಒಂದಾಗುತ್ತಾರೆ. ಈ ಬಾರಿ ನಡೆಯುತ್ತಿರುವ ಸ್ಪರ್ಧೆ ವಿಶೇಷ ಮಹತ್ವ ಪಡೆದಿದ್ದು, ಏಷ್ಯನ್ ಗೇಮ್ಸ್ಗೆ ಭಾರತದ ಪರ ಸ್ಪರ್ಧಿಸಲಿರುವ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳಾ ಸರ್ಫರ್ಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಯುವ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಂಡರ್-14, ಅಂಡರ್-16 ಹಾಗೂ ಅಂಡರ್-18 ವಿಭಾಗಗಳನ್ನು ಪರಿಚಯಿಸಿದ್ದೇವೆ. ಸರ್ಫಿಂಗ್ ಬಗ್ಗೆ ಇನ್ನೂ ಸಾಕಷ್ಟು ಜನರಿಗೆ ಅರಿವು ಇಲ್ಲ. ಹೆಚ್ಚಿನ ಜನರು ಈ ಕ್ರೀಡೆಯನ್ನು ವೀಕ್ಷಿಸಿ ಬೆಂಬಲಿಸಬೇಕು” ಎಂದು ಆಯೋಜಕರಲ್ಲಿ ಒಬ್ಬರಾದ ಆಕಾಶ್ ಹೇಳಿದರು. ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಗಮಿಸಿರುವ ಯುವ ಸ್ಪರ್ಧಾಳುಗಳಲ್ಲೂ ಉತ್ಸಾಹ ಮನೆಮಾಡಿದೆ. ತಮಿಳುನಾಡಿನ 16 ವರ್ಷದ ಸರ್ಫರ್ ಕಮಿಲಾ ಮೂರ್ತಿ ಈಗಾಗಲೇ ನಾಲ್ಕನೇ ಬಾರಿಗೆ ಇಂಡಿಯನ್ ಓಪನ್ ಆಫ್ ಸರ್ಫಿಂಗ್ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಮಿಲಾ ಮೂರ್ತಿ ಮಾತನಾಡಿ, “ನಾನು ನಾಲ್ಕನೇ ವರ್ಷ ಇಂಡಿಯನ್ ಓಪನ್ ಆಫ್ ಸರ್ಫಿಂಗ್ನಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಬಾರಿ ಓಪನ್ ವಿಭಾಗ ಹಾಗೂ ಅಂಡರ್ -18 ವಿಭಾಗ ಎರಡರಲ್ಲೂ ಭಾಗವಹಿಸುತ್ತಿದ್ದೇನೆ. ಇದು ಕೇವಲ ರಾಷ್ಟ್ರೀಯ ಸ್ಪರ್ಧೆಯಲ್ಲ, ಅಂತಾರಾಷ್ಟ್ರೀಯ ಅವಕಾಶಗಳತ್ತ ಕೊಂಡೊಯ್ಯುವ ಮಹತ್ವದ ವೇದಿಕೆಯಾಗಿದೆ. ಏಷ್ಯನ್ ಗೇಮ್ಸ್ಗೆ ಅರ್ಹತಾ ಪ್ರಕ್ರಿಯೆಯ ಭಾಗವಾಗಿರುವುದರಿಂದ ಸ್ಪರ್ಧೆಯ ಮಹತ್ವ ಮತ್ತಷ್ಟು ಹೆಚ್ಚಿದೆ. ಭಾರತದಲ್ಲಿ ಸರ್ಫಿಂಗ್ಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಮಾನ್ಯತೆ ಈ ಕ್ರೀಡೆಯ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ತೋರಿಸುತ್ತದೆ” ಎಂದು ಹೇಳಿದರು. ಒಂದು ದಶಕದ ಹಿಂದೆ ಸೀಮಿತ ವಲಯಕ್ಕೆ ಮಾತ್ರ ಪರಿಚಿತವಾಗಿದ್ದ ಸರ್ಫಿಂಗ್ ಇಂದು ಭಾರತದ ಕ್ರೀಡಾ ನಕ್ಷೆಯಲ್ಲಿ ತನ್ನದೇ ಸ್ಥಾನವನ್ನು ನಿರ್ಮಿಸಿಕೊಳ್ಳುತ್ತಿದೆ. ಮಂಗಳೂರಿನ ತಣ್ಣೀರುಬಾವಿ ಬೀಚ್ನಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಅದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಅಲೆಗಳ ಮೇಲೆ ಸಾಹಸ ಪ್ರದರ್ಶಿಸುತ್ತಿರುವ ಯುವಕರ ಈ ಕಸರತ್ತು ಕೇವಲ ಕ್ರೀಡೆಯಾಗದೆ, ಭಾರತದ ಸರ್ಫಿಂಗ್ ಭವಿಷ್ಯದತ್ತ ಸಾಗುತ್ತಿರುವ ಪಯಣವೂ ಆಗಿದೆ ಎಂಬುದ್ದಾಗಿದೆ.

















