ಮನೆ ಸುದ್ದಿ ಜಾಲ ನವದೆಹಲಿ : ಇಂಡಿಯಾ ಕೂಟದ ‘ಜನಬಂಧನ್’​ ಸಭೆ ,  23 ಪಕ್ಷಗಳು ಭಾಗಿ

ನವದೆಹಲಿ : ಇಂಡಿಯಾ ಕೂಟದ ‘ಜನಬಂಧನ್’​ ಸಭೆ ,  23 ಪಕ್ಷಗಳು ಭಾಗಿ

0

ನವದೆಹಲಿವಿಪಕ್ಷಗಳ ಇಂಡಿಯಾ ಕೂಟದಲ್ಲಿ ಕೆಲ ಪಕ್ಷಗಳ ಅಸಮಾಧಾನ ಮತ್ತು ಅಂತರ ಕಾಯ್ದುಕೊಳ್ಳುತ್ತಿರುವ ನಡುವೆ ದೆಹಲಿಯ ಕಾನ್​​​ಸ್ಟಿಟ್ಯೂಟ್​ ಕ್ಲಬ್​​ನಲ್ಲಿ ಸೋಮವಾರ(ಇಂದು) ಇಂಡಿಯಾ ಜನಬಂಧನ್​ ಸಭೆ ಆಯೋಜಿಸಲಾಗಿದೆ. ಇದರಲ್ಲಿ 23 ಪಕ್ಷಗಳು ಭಾಗವಹಿಸುವ ಸಾಧ್ಯತೆ ಇದೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿರುವ ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​, ಜೂನ್ 8ರಂದು ನಡೆಯಲಿರುವ ಇಂಡಿಯಾ ಕೂಟದ ಮಹತ್ವದ ಸಭೆಗೆ 23 ಪಕ್ಷಗಳು ಬರಲಿವೆ. ಕೆಲವು ಪಕ್ಷಗಳು ವೈಯಕ್ತಿಕ ಕಾರಣಗಳಿಂದಾಗಿ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ್ದರೂ, ಮೈತ್ರಿಕೂಟವು ಒಗ್ಗಟ್ಟಾಗಿದೆ ಎಂದು ತಿಳಿಸಿದ್ದಾರೆ. ಸಭೆಗೆ ಗೈರಾಗುತ್ತಿರುವ ಪಕ್ಷಗಳೂ ಸಹ ಕೇಂದ್ರ ಸರ್ಕಾರದ ನೀತಿಗಳು ಮತ್ತು ಕ್ರಮಗಳ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ. ಕೋಟ್ಯಂತರ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿರುವುದು, ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಮತ್ತು ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಗಳನ್ನು ಈ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ ಎನ್ನಲಾಗಿದೆ.

ಹಣದುಬ್ಬರ, ನಿರುದ್ಯೋಗ ಮತ್ತು ವಿದೇಶಿ ನೀತಿಯಿಂದ ದೇಶದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ. ವೈವಿಧ್ಯತೆಯ ನಡುವೆಯೂ ಇಂಡಿಯಾ ಜನ್‌ಬಂಧನ್ ಒಗ್ಗಟ್ಟಾಗಿ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ. ವಿಪಕ್ಷಗಳ ಮೈತ್ರಿಕೂಟದ ಒಳಗೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ. ಕೂಟದ ಪ್ರಮುಖ ಮಿತ್ರಪಕ್ಷ ತಮಿಳುನಾಡಿನ ಡಿಎಂಕೆ ಪಕ್ಷವು ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ. ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್​ ಬೆಂಬಲಿಸಿದ್ದು ತಮಗೆ ಮಾಡಿದ ದ್ರೋಹ ಎಂದು ಅದರ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಆದರೂ, ದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ನಾವು ಎಂದಿನಂತೆ ಧ್ವನಿ ಎತ್ತುತ್ತಲೇ ಇರುತ್ತೇವೆ” ಎಂದು ಡಿಎಂಕೆ ಇಂಡಿಯಾ ಕೂಟಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ. ಮತ್ತೊಂದೆಡೆ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಭಾನುವಾರ ಕೋಲ್ಕತ್ತಾದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋತ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಟಿಎಂಸಿ ಪಕ್ಷದೊಳಗೆ ಬಂಡಾಯ ಎದ್ದಿದ್ದು, 58 ಶಾಸಕರು ಮತ್ತು ಸುಮಾರು 20 ಲೋಕಸಭಾ ಸಂಸದರು ಪಕ್ಷ ತೊರೆಯುವ ಮುನ್ಸೂಚನೆ ನೀಡಿದ್ದಾರೆ. ಹಾಗೂ ಕೇರಳ ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ನಡೆಸಿದ ವ್ಯವಸ್ಥಿತ ಅಪಪ್ರಚಾರದ ಕುರಿತು ಸಿಪಿಐ(ಎಂ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಿಪಿಐ(ಎಂ) ಮತ್ತು ಬಿಜೆಪಿ ನಡುವೆ ರಹಸ್ಯ ಒಪ್ಪಂದ ನಡೆದಿದೆ ಎಂಬ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದರು.

ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರಿಗೆ ಪಕ್ಷವು ಪತ್ರ ಬರೆದಿದೆ. ಆದಾಗ್ಯೂ, ನಾಳಿನ ಸಭೆಯಲ್ಲಿ ತಮ್ಮ ಪಕ್ಷದ ಸಂಸದ ಜಾನ್ ಬ್ರಿಟ್ಟಾಸ್ ಭಾಗವಹಿಸಲಿದ್ದಾರೆ ಎಂದು ಸಿಪಿಐ(ಎಂ) ಖಚಿತಪಡಿಸಿದೆ. ಹಾಗೂ ಇಂಡಿಯಾ ಮೈತ್ರಿಕೂಟದ ಪರಿಸ್ಥಿತಿಯನ್ನು ಪಶ್ಚಿಮ ಬಂಗಾಳದ ಸಚಿವೆ ಹಾಗೂ ಬಿಜೆಪಿ ನಾಯಕಿ ಅಗ್ನಿಮಿತ್ರಾ ಪೌಲ್ ಲೇವಡಿ ಮಾಡಿದ್ದಾರೆ. ಇಂಡಿಯಾ ಮೈತ್ರಿಕೂಟವನ್ನು ದೇಶದ ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅವರಲ್ಲೇ ಕಚ್ಚಾಟ ನಡೆಯುತ್ತಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಈಗ ಪತನದ ಹಾದಿಯಲ್ಲಿದೆ ಎಂದು ಅವರು ಲೇವಡಿ ಮಾಡಿದ್ದಾರೆ ಎಂಬುದ್ದಾಗಿದೆ.