ಮನೆ ಅಂತಾರಾಷ್ಟ್ರೀಯ ಲಿಜ್​ ಟ್ರಸ್​ ಇಂಗ್ಲೆಂಡ್​ನ ನೂತನ ಪ್ರಧಾನಿ: ರಿಷಿ ಸುನಕ್​ಗೆ ಸೋಲು

ಲಿಜ್​ ಟ್ರಸ್​ ಇಂಗ್ಲೆಂಡ್​ನ ನೂತನ ಪ್ರಧಾನಿ: ರಿಷಿ ಸುನಕ್​ಗೆ ಸೋಲು

0

ಲಂಡನ್(London): ಬ್ರಿಟನ್‌ ವಿದೇಶಾಂಗ ಸಚಿವೆ ಲಿಜ್ ಟ್ರಸ್‌ ಅವರು ಕನ್ಸರ್ವೇಟಿವ್ ಪಕ್ಷದ ನೂತನ ನಾಯಕಿಯಾಗಿ ಆಯ್ಕೆಯಾಗಿದ್ದು, ಮಾರ್ಗರೇಟ್‌ ಥ್ಯಾಚರ್‌ ಮತ್ತು ಥೆರೆಸಾ ಮೇ ಅವರ ನಂತರ ದೇಶ ಮುನ್ನಡೆಸಿದ ಮೂರನೇ ಮಹಿಳಾ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಬ್ರಿಟನ್​ ಪ್ರಧಾನಿ ಹುದ್ದೆಗೆ ನಡೆದ ಪೈಪೋಟಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಭಾರತ ಮೂಲದ ರಿಷಿ ಸುನಕ್ ಅವರನ್ನು ಸೋಲಿಸಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಕನ್ಸರ್ವೇಟಿವ್ ಪಕ್ಷದ ಲಿಜ್​ ಟ್ರಸ್​ ಇನ್ಫೋಸಿಸ್​ನ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್​ ಅವರಿಗಿಂತ ಅತಿ ಹೆಚ್ಚು ಮತಗಳನ್ನು ಗಳಿಸಿ ಗೆಲುವು ಸಾಧಿಸಿದರು.

ರಿಷಿ ಸುನಕ್ ಮತ್ತು ಲಿಜ್ ಟ್ರಸ್ ಅವರು ಇಂಗ್ಲೆಂಡ್​ ಪ್ರಧಾನ ಮಂತ್ರಿ ಹುದ್ದೆಯ ಅಂತಿಮ ಸ್ಪರ್ಧಿಗಳಾಗಿ ಕನ್ಸರ್ವೇಟಿವ್ ಪಕ್ಷದಿಂದ ಸೆಣಸಾಟ ನಡೆಸಿದ್ದರು. ಆರು ವಾರಗಳ ಸುದೀರ್ಘ ಚುನಾವಣೆಯ ಬಳಿಕ ಲಿಜ್ ಟ್ರಸ್ ಅವರು ಈ ಗೆಲುವು ಪಡೆದರು.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ: ಇಂಗ್ಲೆಂಡ್​ ನೂತನ ಪ್ರಧಾನಮಂತ್ರಿಯಾದ ಆಯ್ಕೆಯಾದ ಲಿಜ್​ ಟ್ರಸ್​ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಟ್ವೀಟ್​ ಮಾಡಿ ಶುಭಾಶಯ ಕೋರಿರುವ ಅವರು, ಬ್ರಿಟನ್​ನ ಮುಂದಿನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಕ್ಕಾಗಿ ನಿಮಗೆ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ಭಾರತ- ಇಂಗ್ಲೆಂಡ್​ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.