ಮನೆ ಕಾನೂನು ಅಕ್ರಮ ಆಸ್ತಿ ಗಳಿಕೆ: ನಿವೃತ್ತ ಆರ್’ಟಿಓ ಅಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ

ಅಕ್ರಮ ಆಸ್ತಿ ಗಳಿಕೆ: ನಿವೃತ್ತ ಆರ್’ಟಿಓ ಅಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ

0

ಬೆಳಗಾವಿ(Belagavi): ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ನಿವೃತ್ತ ಸಾರಿಗೆ ಅಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 63 ಲಕ್ಷ ರೂ ದಂಡ ವಿಧಿಸಿ ಬೆಳಗಾವಿ ಲೋಕಾಯುಕ್ತ ನ್ಯಾಯಾಲಯ ತೀರ್ಪು ನೀಡಿದೆ.

ಕೋಲಾರ ಮೂಲದ ಬೆಳಗಾವಿಯ ಆಂಜನೇಯ ನಗರ ನಿವಾಸಿ ಪಿ.ಶಾಂತಕುಮಾರ್ ಶಿಕ್ಷೆಗೆ ಒಳಗಾದವರು.

ಬೀದರ್ ಜಿಲ್ಲೆಯ ಹುಮನಾಬಾದ್ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆಗಿದ್ದಾಗ ಅಕ್ರಮವಾಗಿ ಅಪಾರ ಆಸ್ತಿ ಸಂಪಾದಿಸಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಅಂದಿನ ಬೆಳಗಾವಿ ಲೋಕಾಯುಕ್ತ ಇನ್ಸ್’ಪೆಕ್ಟರ್ ಆರ್.ಕೆ.ಪಾಟೀಲ್ 2010ರ ಮೇ 3 ರಂದು ಪ್ರಕರಣ ದಾಖಲಿಸಿದ್ದರು.

ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಆಂಜನೇಯ ನಗರದಲ್ಲಿ ಶಾಂತಕುಮಾರ್ ಮನೆ ಹಾಗೂ ಹುಮನಾಬಾದ್ ಕಚೇರಿ ಮೇಲೆ ಅಧಿಕಾರಿಗಳು ನಡೆಸಿದ್ದ ದಾಳಿ ವೇಳೆ 1.14 ಆಸ್ತಿ ಸಿಕ್ಕಿತ್ತು. ಘಟನೆಗೆ ಸಂಬಂಧಿಸಿ ಲೋಕಾಯುಕ್ತ ಇನ್ಸ್’ಪೆಕ್ಟರ್ ಆಗಿದ್ದ ಆರ್.ಬಿ.ಹವಾಲ್ದಾರ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದವನ್ನು ನ್ಯಾಯಾಧೀಶ ಮೋಹನ ಪ್ರಭು ಆಲಿಸಿದ್ದರು. ಇದರಲ್ಲಿ 63 ಲಕ್ಷ ರೂ. ಹಣವನ್ನು ಭ್ರಷ್ಟಚಾರದ ಹಾಗೂ ಅಕ್ರಮವಾಗಿ ಸಂಪಾದಿಸಿದ್ದಾರೆ ಎನ್ನುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಶಾಂತಕುಮಾರ್’ಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 63 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.