ಮನೆ ದೇವರನಾಮ ನೆನೆವೆನನುದಿನ ನೀಲ

ನೆನೆವೆನನುದಿನ ನೀಲ

0

ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ||pa||

ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಭರಿತನ ||a.pa||

ದೇವಕೀ ಜಠರೋ ದಯಾಂಬುಧಿ ಚಂದ್ರನ – ಗುಣ ಸಾಂದ್ರನ

ಗೋವಜ್ರಕೆ ಘನ ಯಮುನೆ ದಾಟಿ ಬಂದನ – ಅಲ್ಲಿ ನಿಂದನ

ಮಾವ ಕಳುಹಿದ ಮಾಯಾ ಶಟವಿಯ ಕೊಂದನ – ಚಿದಾನಂದನ

ದೇವರಿಪು ದೈತ್ಯೇಂದ್ರ ಶಕಟನ ಒದ್ದನ – ಶ್ರುತಿ ಸಿದ್ಧನ||1||

ಗೋಕುಲದ ಗೋಪಿಯರ ವಂಚಕ ಚೋರನ – ಬಹು ಧೀರನ

ಅನೇಕ ನಾರಿಯರ್ವಸನವನು ಕದ್ದೊಯ್ದನ – ತುರುಗಾಯ್ದನ

ನಾಕಿಯರಿಗರಿ ಧೇನುಕ ವತ್ಸವಿ ಘಾತನ – ವಿಖ್ಯಾತನ

ಕಾಕುಮತಿ ಕಾಳಿಂಗನ ಫಣ ತುಳಿದನ – ಅವಗೊಲಿದನ||2||

ಶೈಲವನು ಅಹಿ ಶಯನ ಬೆರಳಲಿ ಆಂತನ – ಬಲವಂತನ

ಸೋಳ ಸಾಸಿರ ಬಾಲೆಯರ ಕರ ಪಿಡಿದನ – ಸುಧೆಗುಡಿದನ

ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ – ಅಲ್ಲಿ ನಲಿದನ

ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ – ಸಂತುಷ್ಟನ||3||

ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ – ಸುರರಾಳ್ವನ

ಅಕ್ರೂರ ಕರೆಯಲು ಹರುಷದಿಂದಲಿ ಬಂದನ – ಸುರವಂದ್ಯನ

ನಾರಿ ಕಬುಜೆಗೆ ಭೂರಿ ಸಂತಸವಿತ್ತನ – ಅತಿಶಕ್ತನ

ವಾರಣವನು ಕೆಡಹಿದ ಪ್ರತಿಮಲ್ಲನ – ಅತಿ ಚೆಲ್ವನ||4||

ಸುಲಭದಿಂದಲಿ ಶಿವನ ಧನುವನು ಮುರಿದನ – ನೆರೆ ಮೆರೆದನ

ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ – ಜಯವಂತನ

ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ – ಹುಡಿಗೆಡೆದನ

ಬಲದಿ ತಾಯಿ ತಂದೆ ಬಂಧನ ಕಡಿದನ – ಯಶ ಪಡೆದನ||5||

ಭುವನ ಪಟ್ಟವನುಗ್ರಸೇನಗೆ ಕೊಟ್ಟನ – ಅತಿ ಶ್ರೇಷ್ಠನ

ಯುವತಿಯರಿಗುದ್ಧವನ ಕಳುಹಿದ ಜಾಣನ – ಸುಪ್ರವೀಣನ

ವಿವಿಧ ವಿದ್ಯಾಕಲೆಗಳೆಲ್ಲವ ನರಿತನ – ಶುಭ ಚರಿತನ

ಜನವ ಶಿಕ್ಷಿಸಿ ದ್ವಿಜನ ಕಂದನ ತಂದನ – ಆನಂದನ||6||

ಸುಮತಿ ಖಳಮಾಗಧನ ಯುದ್ಧದಿ ಗೆದ್ದನ – ಅನವದ್ಯನ

ದುಮಣಿ ಸಮ ದ್ವಾರಕಿಯ ರಚಿಸಿದು ದಾರನ – ಗಂಭೀರನ

ಸುಮತಿ ಮುಚುಕುಂದನೊದ್ದ ಯವನನ ಸುಟ್ಟನ – ಅತಿ ದಿಟ್ಟನ

ವಿಮಲ ಸುಚರಿತ್ರಾಷ್ಟ ಮಹಿಷಿಯ ರಾಳ್ದನ – ನೆರೆ ಬಾಳ್ದನ||7||

ಮುರನರಕ ಮುಖ್ಯರನು ಚಕ್ರದಿ ತಂದನ – ಕರಿವರದನ

ಸುರತರುವ ಸತಿಗಾಗಿ ತಂದ ಸಮರ್ಥನ – ಜಗತ್ಕರ್ತನ

ದುರುಳ ಶಿಶುಪಾಲಾದಿ ದೈತ್ಯ ಸಂಹಾರನ – ಬಹುಶೂರನ

ಕುರುಕುಲಕೆ ಲಯವಿತ್ತ ಪಾಂಡವಪ್ರೀಯನ – ಕವಿಗೇಯನ||8||

ಇಂತು ಇಳೆಯ ಸುಜನರ ಸಲಹುವ ಕಾಂತನ – ಸಿರಿವಂತನ

ಪಂಥವುಳ್ಳ ಪ್ರಸನ್ನ ಹಯವದನನ – ಮುನಿಮಾನ್ಯನ

ಸಂತತವೀ ಸಾರಕಥೆಯನು ಕೇಳ್ವರ – ನೆರೆಬಾಳ್ವರ

ಕಂತುಷಿತ ಕಾರುಣ್ಯದಿಂದಲಿ ಪೊರೆವನು – ಸುಖಗರೆವನು||9||