ಮೈಸೂರು : ಮೈಸೂರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಆಂಧ್ರಪ್ರದೇಶದ ಗಾಂಜಾ ಮಾರಾಟಗಾರನಿಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಸ್. ಸಂಗ್ರೇಶಿ ಅವರು 10 ವರ್ಷ ಕಠಿಣ ಶಿಕ್ಷೆ ಮತ್ತು ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿ ಬೆನೋತ್ ವೆಂಕಣ್ಣ (47) ಶಿಕ್ಷೆಗೆ ಗುರಿಯಾದವನು.
ಈತ ಮೈಸೂರಿನ ಕೆಲವರಿಗೆ ಸಗಟಾಗಿ ಗಾಂಜಾ ಸರಬರಾಜು ಮಾಡುತ್ತಿದ್ದ ಎಂದು ಹೇಳಲಾಗಿದೆ. 2021ರ ಜನವರಿ 7ರಂದು ಬಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಉದಯಗಿರಿ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಎಂ.ಎಂ. ಪೂಣಚ್ಚ, ಸಬ್ ಇನ್ಸ್ಪೆಕ್ಟರ್ ಮದನ್ ಕುಮಾರ್ ಹಾಗೂ ಸಿಬ್ಬಂದಿ ಸಾತಗಳ್ಳಿ ಬಸ್ ಡಿಪೋ ಬಳಿ ಈತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಸೂಟ್ ಕೇಸ್, ಬ್ಯಾಗನ್ನು ಪರಿಶೀಲಿಸಿದಾಗ ವಿವಿಧ ಗಾತ್ರದ ಟೇಪ್ ಗಳಲ್ಲಿ ಸುತ್ತಿದ್ದ ಪಟ್ಟಣಗಳಲ್ಲಿ ಒಟ್ಟು 22 ಕೆ.ಜಿ. ಗಾಂಜಾ ಪತ್ತೆಯಾಗಿತ್ತು.
ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಕಳೆದ 2 ವರ್ಷದ ಹಿಂದೆ ರಾಜೀವ್ ನಗರದ ಅಹಮದ್ ಪಾಷ ಎಂಬಾತನಿಗೆ ಗಾಂಜಾ ಮಾರಾಟ ಮಾಡಿದ್ದು, ಈಗ ಆತನಿಗೆ ಈ ಗಾಂಜಾವನ್ನು ಮಾರಾಟ ಮಾಡಲು ಬಂದಿದ್ದು, ಆತನ ಮನೆ ಗುರುತು ಸಿಗದೇ ಹುಡುಕುತ್ತಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಗಾಂಜಾ ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದ ಇನ್ಸ್ಪೆಕ್ಟರ್ ಪೂಣಚ್ಚ ಅವರ ತಂಡ ಪ್ರಕರಣದ ದಾಖಲಿಸಿದ್ದು. ನಂತರ ಈ ಠಾಣೆಗೆ ಸಬ್ ಇನ್ಸ್ಪೆಕ್ಟರ್ ಆಗಿ ಜಯಕೀರ್ತಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಚಿಣ್ಣಪ್ಪವಾದ ಮಂಡಿಸಿದ್ದರು.