ಮನೆ ಮನರಂಜನೆ ‘ಗಂಟಮೂಟೆ’ ತಂಡದಿಂದ ಹೊಸಚಿತ್ರ ‘ಕೆಂಡ’: ಮೋಶನ್‌ ಪೋಸ್ಟರ್‌ ಬಿಡುಗಡೆ

‘ಗಂಟಮೂಟೆ’ ತಂಡದಿಂದ ಹೊಸಚಿತ್ರ ‘ಕೆಂಡ’: ಮೋಶನ್‌ ಪೋಸ್ಟರ್‌ ಬಿಡುಗಡೆ

0

ಈ ಹಿಂದೆ “ಗಂಟುಮೂಟೆ’ ಎಂಬ ಸದಭಿರುಚಿ ಸಿನಿಮಾದ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ಚಿತ್ರತಂಡ ಈ ಬಾರಿ “ಕೆಂಡ’ ಎಂಬ ಅಂಥದ್ದೇ ಮತ್ತೂಂದು ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.

 “ಅಮೇಯುಕ್ತಿ ಸ್ಟುಡಿಯೋಸ್‌’ ಮೂಲಕ ರೂಪಾ ರಾವ್‌ ಮತ್ತು ಸಹದೇವ್‌ ಜೊತೆಗೂಡಿ ನಿರ್ಮಿಸುತ್ತಿರುವ “ಕೆಂಡ’ ಸಿನಿಮಾವನ್ನು ಸಹದೇವ್‌ ಕೆಲವಡಿ ನಿರ್ದೇಶನ ಮಾಡುತ್ತಿದ್ದು, ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗುತ್ತಿದ್ದಾರೆ.

ಈಗಾಗಲೇ ಸದ್ದಿಲ್ಲದೆ “ಕೆಂಡ’ ಸಿನಿಮಾದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಿದೆ.

ಬೆಂಗಳೂರಿನಂಥ ಮಹಾನಗರದಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ ಜೊತೆಗೆ ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳನ್ನಿಟ್ಟುಕೊಂಡು “ಕೆಂಡ’ ಚಿತ್ರ ತಯಾರಾಗುತ್ತಿದೆ. ಫೌಂಡ್ರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಹೇಗೆ ಈ ವ್ಯವಸ್ಥೆಯ ವಿಷವ್ಯೂಹಕ್ಕೆ ಸಿಲುಕುತ್ತಾನೆ, ಆತನನ್ನು ಪಟ್ಟಭದ್ರರು ಹೇಗೆಲ್ಲ ಬಳಸಿಕೊಳ್ಳುತ್ತಾರೆ, ಆ ಕ್ಷಣದೊಂದು ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತೆ ಎಂಬಿತ್ಯಾದಿ ಕುತೂಹಲಕರ ತಿರುವುಗಳೊಂದಿಗೆ “ಕೆಂಡ’ ಸಿನಿಮಾದ ಕಥಾಹಂದರ ಸಾಗುತ್ತದೆ.

ಇನ್ನು “ಕೆಂಡ’ ಸಿನಿಮಾದಲ್ಲಿ ಬಿ. ವಿ ಭರತ್‌, ಪ್ರಣವ್‌ ಶ್ರೀಧರ್‌, ವಿನೋದ್‌ ರವೀಂದ್ರನ್‌, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜಯಂತ್‌ ಕಾಯ್ಕಿಣಿ ಸಿನಿಮಾದ ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದು, ಅವರ ಪುತ್ರ ರಿತ್ವಿಕ್‌ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಈಗಾಗಲೇ “ಕೆಂಡ’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯಗಳು ಅಂತಿಮ ಹಂತದಲ್ಲಿದ್ದು, ಇದೇ ವರ್ಷಾಂತ್ಯದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.