ಮನೆ ಅಪರಾಧ ಇಂದೋರ್: ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕೆ ಲಿವ್-ಇನ್ ಪಾರ್ಟನರ್ ನ ಹತ್ಯೆಗೈದ ಯುವಕ

ಇಂದೋರ್: ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕೆ ಲಿವ್-ಇನ್ ಪಾರ್ಟನರ್ ನ ಹತ್ಯೆಗೈದ ಯುವಕ

0

ಇಂದೋರ್: ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದ ಯುವತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಆಕೆಯ ಲಿವ್-ಇನ್ ಪಾರ್ಟನರ್ ನನ್ನು ಇಂದೋರ್‌ನಲ್ಲಿ ಬುಧವಾರ ಬಂಧಿಸಲಾಗಿದೆ.

ಆರೋಪಿಯನ್ನು ಪ್ರವೀಣ್ ಸಿಂಗ್ ಧಾಕಡ್(24) ಎಂದು ಗುರುತಿಸಲಾಗಿದೆ.

ಹತ್ಯೆಯಾದ ಯುವತಿ(20) ಮತ್ತು ಆರೋಪಿ ಯುವಕ ಕಳೆದ ಕೆಲವು ದಿನಗಳಿಂದ ನಗರದ ರಾವ್ಜಿ ಬಜಾರ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಸೆಂಬರ್ 7 ರಂದು ಯುವತಿಯನ್ನು ಹತ್ಯೆ ಮಾಡಲಾಗಿದ್ದು, ಎರಡು ದಿನಗಳ ನಂತರ ಡಿಸೆಂಬರ್ 9 ರಂದು ಪೊಲೀಸರು ಆಕೆಯ ದೇಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಭಿನಯ್ ವಿಶ್ವಕರ್ಮ ಸುದ್ದಿಗಾರರಿಗೆ ತಿಳಿಸಿದರು.

ಆರೋಪಿ ಪ್ರವೀಣ್ ಸಿಂಗ್ ಧಾಕಡ್, ತನ್ನೊಂದಿಗೆ ವಾಸಿಸುತ್ತಿದ್ದ ಯುವತಿ ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕೆ ಕೋಪಗೊಂಡು ಅವಳ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.

ಮಹಿಳೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ವಿಶ್ವಕರ್ಮ ಅವರು ತಿಳಿಸಿದ್ದಾರೆ.

ಘಟನೆ ನಂತರ ಗಾಬರಿಗೊಂಡ ಆರೋಪಿ ಮನೆಗೆ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾನೆ ಮತ್ತು ಆಕೆಯ ಮೊಬೈಲ್ ಫೋನ್ ಅನ್ನು ಸಹ ತೆಗೆದುಕೊಂಡು ಹೋಗಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೊಲೆ ಬೆಳಕಿಗೆ ಬಂದ ನಂತರ ಧಾಕಡ್ ನನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ.