ಬೆಂಗಳೂರು: ಬೆಂಗಳೂರಿನ ಕಾಡುಗೋಡಿಯಲ್ಲಿ ಲಿಫ್ಟ್ ಕಾಮಗಾರಿಗೆಂದು ತೋಡಲಾಗಿದ್ದ ಗುಂಡಿಯಲ್ಲಿ ಮಳೆ ನೀರು ತುಂಬಿತ್ತು. ಆಟವಾಡುವಾಗ ಈ ಗುಂಡಿಗೆ ಬಿದ್ದ 7 ವರ್ಷದ ಸುಹಾಸ್ ಗೌಡ ಎಂಬ ಬಾಲಕ ಮೃತಪಟ್ಟಿದ್ದಾನೆ.
ಡೇರಿ ಅಧ್ಯಕ್ಷ ಸೊಣ್ಣಪ್ಪ, ಸೆಕ್ರೆಟರಿ ಸುನೀಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹಾಲಿನ ಡೇರಿ ಕಟ್ಟಡ ನಿರ್ಮಿಸುತ್ತಿದ್ದ ಸೊಣ್ಣಪ್ಪ ಪುತ್ರ ರವಿಕುಮಾರ್ ಲಿಫ್ಟ್ ನಿರ್ಮಾಣಕ್ಕೆ ಗುಂಡಿಯನ್ನು ಅಗೆಸಿದ್ದರು. ಆಟವಾಡುವಾಗ ಕಾಲು ಜಾರಿ ಬಾಲಕ ಆ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಭಾರೀ ಮಳೆಯಿಂದ ಆ ಗುಂಡಿಯಲ್ಲಿ ನೀರು ತುಂಬಿದ್ದರೂ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸದ ಹಿನ್ನೆಲೆಯಲ್ಲಿ ಒಂದು ಜೀವ ಬಲಿಯಾಗಿದೆ.
ಇದುವರೆಗೆ ನೊಂದ ಕುಟುಂಬಕ್ಕೆ ಸಾಂತ್ವನ ಹೇಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಶ್ರೀಕನ್ಯಾ ಹಾಗೂ ಮುನಿರಾಜು ದಂಪತಿ ಪುತ್ರ ಸುಹಾಸ್ ಗೌಡ ಸಾವನ್ನಪ್ಪಿದ್ದಾನೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಕನ್ನಮಂಗಲದ ನಿರ್ಮಾಣ ಹಂತದ ಹಾಲಿನ ಡೇರಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.