ಮನೆ ರಾಜ್ಯ ಅಗ್ನಿಪಥ್ ಯೋಜನೆಯ ವಿರುದ್ಧ ಎಐಡಿವೈಓ ಇಂದ ಪ್ರತಿಭಟನೆ

ಅಗ್ನಿಪಥ್ ಯೋಜನೆಯ ವಿರುದ್ಧ ಎಐಡಿವೈಓ ಇಂದ ಪ್ರತಿಭಟನೆ

0

ಮೈಸೂರು(Mysuru): ಕೇಂದ್ರದ ಅಗ್ನಿಪಥ ಯೋಜನೆ ವಿರೋಧಿಸಿ ಎಐಡಿವೈಓ ಹಾಗೂ ಎಐಡಿಎಸ್ ಓ ವತಿಯಿಂದ ಹಾರ್ಡಿಂಗ್ ಸರ್ಕಲ್ ಬಳಿ ಅಗ್ನಿಪಥ್ ಯೋಜನೆಯ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಎಐಡಿವೈಓ ನ ಅಖಿಲ ಭಾರತ ಅಧ್ಯಕ್ಷರಾದ ನಿರಂಜನ್ ನಸ್ಕರ್, ಜೂನ್ 14 ರಂದು ಕೇಂದ್ರ ಸರ್ಕಾರ ಘೋಷಿಸಿದ ಎರಡು ವಿನೂತನ ನೇಮಕಾತಿ ಯೋಜನೆಗಳು ವಾಸ್ತವದಲ್ಲಿ ದೇಶದ ಕೋಟ್ಯಾಂತರ ನೊಂದ ನಿರುದ್ಯೋಗಿ ಯುವಕರನ್ನು ಭ್ರಮೆಯಲ್ಲಿ ಮುಳಿಗಿಸುವ ಪ್ರಯತ್ನಗಳಾಗಿವೆ ಎಂದು ಹೇಳಿದರು.

ಮೊದಲನೆಯ ಯೋಜನೆಯು, ಮುಂದಿನ 18 ತಿಂಗಳುಗಳೊಳಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 10 ಲಕ್ಷದಷ್ಟು ಹುದ್ದೆಗಳನ್ನು ಭರ್ತಿ ಮಾಡುವುದಾದರೆ, ಎರಡನೆಯದು ರಕ್ಷಣಾ ಪಡೆಗೆ ಸಂಬಂಧಿಸಿದ ಅಗ್ನಿಪಥ್ ಯೋಜನೆಯಾಗಿದೆ. ಸರ್ಕಾರವು ನಿರುದ್ಯೋಗಿ ಯುವಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತ ಮಾಡುತ್ತಿರುವ ಈ ಅಪಮಾನವನ್ನು ಈ ದೇಶದ ಪ್ರಜ್ಞಾವಂತ ಯುವಜನತೆಯು ಒಕ್ಕೊರಲಿನಿಂದ ಪ್ರತಿಭಟಿಸಬೇಕಿದೆ ಎಂದರು.

ಮೋದಿ ಸರ್ಕಾರವು ಈ ಆಘಾತಕಾರಿ ಅಂಶಗಳತ್ತ ಗಮನ ನೀಡದೆ, ಇಲ್ಲಿಯವರೆಗೂ ನಿರುದ್ಯೋಗ ಸಮಸ್ಯೆಯೇ ಇಲ್ಲವೆಂದು ವಾದಿಸುತ್ತಾ ಬಂದು, ಈಗ ಒಂದೂವರೆ ವರ್ಷದಲ್ಲಿ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಮಾತನಾಡುತ್ತಿದೆ. ಇದು ಮುಂದಿರುವ ರಾಜ್ಯ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಮಾಡುತ್ತಿರುವ ರಾಜಕೀಯ ತಂತ್ರ ಎಂದು ಆರೋಪಿಸಿದ್ದಾರೆ.

ಅಗ್ನಿಪಥ್ ಯೋಜನೆಯೂ ಸಹ ಉದ್ಯೋಗ ಭದ್ರತೆಯ ಬುನಾದಿಗೇ ಪೆಟ್ಟು ನೀಡುತ್ತದಲ್ಲದೆ, ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಶ್ರಮ ವಹಿಸುತ್ತಿದೆ ಎಂದು ಬಿಂಬಿಸಿ, ಯುವಜನರನ್ನು ವಂಚಿಸುವ ತಂತ್ರವಾಗಿದೆ. ಕಳೆದ 30 ವರ್ಷಗಳಿಂದ ಅನುಕ್ರಮವಾಗಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಎಲ್ಲಾ ಸರ್ಕಾರಗಳು ಜಾಗತೀಕರಣ ಮತ್ತು ಉದಾರೀಕರಣ ನೀತಿಗಳನ್ನು ಜಾರಿಗೊಳಿಸುತ್ತಾ ಬಂದು, ಖಾಯಂ ಉದ್ಯೋಗವೆಂಬ ಪರಿಕಲ್ಪನೆಯನ್ನೇ ಇಲ್ಲವಾಗಿಸಿವೆ. ಈಗ ಅಗ್ನಿಪಥ್ ಯೋಜನೆಯಲ್ಲಿ ೪ ವರ್ಷ ರಕ್ಷಣಾ ಪಡೆಯಲ್ಲಿ ಕಾರ್ಯ ನಿರ್ವಹಿಸಿದ ನಂತರ  ನಾಗರಿಕ ಸಮಾಜಕ್ಕೆ ಕಾಲಿಡುವ ಈ ಯುವಕರ ಜೀವನ ದುಸ್ತರವಾಗಲಿದೆ. ರಕ್ಷಣಾ ಪಡೆಯಲ್ಲಿ ಲಕ್ಷಕ್ಕೂ ಮಿಗಿಲಾಗಿ ಹುದ್ದೆಗಳು ಖಾಲಿ ಇದ್ದರೂ, ಪೂರ್ಣ ಪ್ರಮಾಣದಲ್ಲಿ ಯುವಕರನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳಲು ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.

ಈ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಯುವಜನರು ದೀರ್ಘಕಾಲೀನವಾದ ನಿರ್ಣಾಯಕ ಹೋರಾಟಕ್ಕೆ ಅಣಿಯಾಗಬೇಕಿದೆ. ಸರ್ಕಾರಗಳ ಈ ಕುಂತಂತ್ರವನ್ನು ಯುವಜನರು ಅರ್ಥಮಾಡಿಕೊಂಡು, ರಾಷ್ಟ್ರವ್ಯಾಪಿ ಚಳುವಳಿಯನ್ನು ಕಟ್ಟಿ, ಸರ್ಕಾರವು ತನ್ನ ಆದೇಶವನ್ನು ಹಿಂಪಡೆಯುವಂತೆ ಮತ್ತು ಎಲ್ಲಾ ನಿರುದ್ಯೋಗಿಗಳಿಗೆ ಖಾಯಂ ಉದ್ಯೋಗ ನೀಡುವಂತೆ ಒತ್ತಾಯಿಸಬೇಕೆಂದು ಎಐಡಿವೈಓ ಕರೆ ನೀಡುತ್ತದೆ..

ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಸುಮಾ ಮತ್ತು ಎಐಡಿಎಸ್ಓ ನ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಎಐಡಿವೈಓ ನ ನೀತು , ಶ್ರೀಧರ್, ಪರಮೇಶ್, ಹನುಮಂತು. ಎಐಡಿಎಸ್ಓ ನ ಮೋನಿಷಾ, ಚಂದ್ರಿಕಾ, ಸ್ವಾತಿ, ಚಂದನ, ಹೇಮಂತ್ ಹಾಜರಿದ್ದರು.

ಹಿಂದಿನ ಲೇಖನಹಳೆ ಮೈಸೂರು ಭಾಗದ ಕಾಂಗ್ರೆಸ್, ಜೆಡಿಎಸ್ ನ ಶಾಸಕರು ಬಿಜೆಪಿ ಸೇರಲಿದ್ದಾರೆ: ಆರ್.ಅಶೋಕ್
ಮುಂದಿನ ಲೇಖನಪಿಯು ಅನುತ್ತೀರ್ಣ: ಮನನೊಂದು ಮಂಡ್ಯದ ವಿದ್ಯಾರ್ಥಿನಿ ಆತ್ಮಹತ್ಯೆ