ಮನೆ ಸುದ್ದಿ ಜಾಲ ಅಲೀನಾ, ಸಿಂಧು ಬಂಧನ : ಮಾಡೆಲ್‌ಗಳಿಗೆ ದುಬೈನಲ್ಲಿ ಕೆಲಸದ  ಆಸೆ ತೋರಿಸಿ ಅತ್ಯಾ*ಚಾರ

ಅಲೀನಾ, ಸಿಂಧು ಬಂಧನ : ಮಾಡೆಲ್‌ಗಳಿಗೆ ದುಬೈನಲ್ಲಿ ಕೆಲಸದ  ಆಸೆ ತೋರಿಸಿ ಅತ್ಯಾ*ಚಾರ

0

ವಿದೇಶದಲ್ಲಿ ಮಾಡೆಲಿಂಗ್ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕ ಯುವತಿಯರನ್ನು ಲೈಂಗಿಕ ದಂಧೆಯ ಕೂಪಕ್ಕೆ ತಳ್ಳುತ್ತಿದ್ದ ಬೃಹತ್ ಜಾಲವೊಂದನ್ನು ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಲಾಡಿ ಮಾಡೆಲ್ ಅಲೀನಾ ಎಂಬಾಕೆಯನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದ್ದು, ಈ ದಂಧೆಯ ಮತ್ತೊಬ್ಬ ಪ್ರಮುಖ ಸೂತ್ರಧಾರಿ ಸಿಂಧು ಎಂಬಾಕೆಯನ್ನು ಮುಂಬೈನಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಇಬ್ಬರು ಮಹಿಳೆಯರ ಬಂಧನದಿಂದಾಗಿ ಕೇರಳದ ಗ್ಲಾಮರ್ ಲೋಕದ ಕರಾಳ ಮುಖ ಬಯಲಾಗಿದ್ದು ಆರೋಪಿಗಳಾದ ಅಲೀನಾ ಮತ್ತು ಸಿಂಧು ಅವರು ವಿದೇಶದಲ್ಲಿ, ವಿಶೇಷವಾಗಿ ದುಬೈನಲ್ಲಿ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳ ಮಾಡೆಲಿಂಗ್ ಅವಕಾಶ ಕೊಡಿಸುವುದಾಗಿ ಯುವತಿಯರನ್ನು ನಂಬಿಸುತ್ತಿದ್ದರು. ಉಜ್ವಲ ಭವಿಷ್ಯದ ಕನಸು ಹೊತ್ತ ಮಾಡೆಲ್‌ಗಳನ್ನು ದುಬೈಗೆ ಕರೆದೊಯ್ದ ಮೇಲೆ ಇವರ ಅಸಲಿ ಬಣ್ಣ ಬಯಲಾಗುತ್ತಿತ್ತು. ಅಲ್ಲಿ ಯುವತಿಯರಿಗೆ ಬಲವಂತವಾಗಿ ಡ್ರಗ್ಸ್ ನೀಡಿ ಪ್ರಜ್ಞೆ ತಪ್ಪಿಸಲಾಗುತ್ತಿತ್ತು. ಆ ಸ್ಥಿತಿಯಲ್ಲಿ ಅವರ ಮೇಲೆ ಅಮಾನವೀಯವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

ಹೀಗೆ ಈ ಜಾಲದ ಕ್ರೌರ್ಯ ಇಲ್ಲಿಗೆ ನಿಲ್ಲುತ್ತಿರಲಿಲ್ಲ. ಯುವತಿಯರ ಮೇಲೆ ಅತ್ಯಾಚಾರ ಎಸಗುವ ದೃಶ್ಯಗಳನ್ನು ಗುಟ್ಟಾಗಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಆ ವಿಡಿಯೋಗಳನ್ನೇ ಇಟ್ಟುಕೊಂಡು, ‘ನಾವು ಹೇಳಿದಂತೆ ಕೇಳದಿದ್ದರೆ ಈ ವಿಡಿಯೋಗಳನ್ನು ಇಂಟರ್ನೆಟ್‌ನಲ್ಲಿ ಹರಿಬಿಡುತ್ತೇವೆ ಅಥವಾ ನಿಮ್ಮ ಕುಟುಂಬಕ್ಕೆ ಕಳುಹಿಸುತ್ತೇವೆ’ ಎಂದು ಬೆದರಿಕೆ ಹಾಕುತ್ತಿದ್ದರು. ಈ ಬ್ಲ್ಯಾಕ್‌ಮೇಲ್‌ಗೆ ಹೆದರಿ ಅನೇಕ ಯುವತಿಯರು ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಪೊಲೀಸರ ತನಿಖೆಯ ವೇಳೆ ಯುವತಿಯರು ಅನುಭವಿಸಿರುವ ಚಿತ್ರಹಿಂಸೆಯ ಕಥೆಗಳು ಕೇಳಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಬಂಧಿತ ಅಲೀನಾ ಸಾಮಾನ್ಯ ಹುಡುಗಿಯಲ್ಲ. ಈಕೆ ಈ ಹಿಂದೆಯೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಕೆಗೆ ಕೇರಳದ ಕೆಲವು ಕುಖ್ಯಾತ ಗೂಂಡಾ ಗ್ಯಾಂಗ್‌ಗಳ ಜೊತೆಗೆ ನೇರ ಸಂಪರ್ಕವಿದೆ. ಸಂತ್ರಸ್ತ ಯುವತಿಯರನ್ನು ಬೆದರಿಸಲು ಈಕೆ ಈ ಗ್ಯಾಂಗ್‌ಗಳ ಸಹಾಯ ಪಡೆಯುತ್ತಿದ್ದಳು ಎನ್ನಲಾಗಿದೆ.

ಸದ್ಯ ಕೊಚ್ಚಿಯಲ್ಲಿ ಅಲೀನಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಮುಂಬೈನಲ್ಲಿ ಸಿಕ್ಕಿಬಿದ್ದಿರುವ ಸಿಂಧುಳನ್ನು ಇಂದು ಕೇರಳಕ್ಕೆ ಕರೆತರಲಾಗುತ್ತಿದೆ. ಹಾಗೂ ಈ ಜಾಲದ ಮೂಲಕ ನೂರಾರು ಯುವತಿಯರು ವಂಚನೆಗೊಳಗಾಗಿರುವ ಶಂಕೆ ಇದೆ. ಆದರೆ, ಮಾನಹಾನಿಯಾಗುವ ಭೀತಿಯಿಂದ ಮತ್ತು ಆರೋಪಿಗಳ ಬೆದರಿಕೆಗೆ ಹೆದರಿ ಈವರೆಗೆ ಕೇವಲ ಮೂರು ಮಂದಿ ಮಾತ್ರ ಧೈರ್ಯ ಮಾಡಿ ದೂರು ನೀಡಿದ್ದಾರೆ. ಪೊಲೀಸರು ಹೆಚ್ಚಿನ ಯುವತಿಯರಿಗೆ ದೂರು ನೀಡಲು ಪ್ರೇರೇಪಿಸುತ್ತಿದ್ದು, ಈ ದಂಧೆಯ ಹಿಂದೆ ಇನ್ನು ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿರುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಇನ್ನೂ ಹಲವು ಬಂಧನಗಳಾಗುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.