ಮನೆ ಸುದ್ದಿ ಜಾಲ ಸಣ್ಣ ಮಠವನ್ನು ದೊಡ್ಡ ಮರವನ್ನಾಗಿ ಬೆಳೆಸಿದ್ದು, ಬಾಲಗಂಗಾಧರನಾಥರು – ಹೆಚ್‌ಡಿಕೆ

ಸಣ್ಣ ಮಠವನ್ನು ದೊಡ್ಡ ಮರವನ್ನಾಗಿ ಬೆಳೆಸಿದ್ದು, ಬಾಲಗಂಗಾಧರನಾಥರು – ಹೆಚ್‌ಡಿಕೆ

0

ಮಂಡ್ಯ : ತ್ರಿವಿಧ ದಾಸೋಹದ ಮೂಲಕ ಆದಿಚುಂಚನಗಿರಿ ಮಠ ಪ್ರಸಿದ್ಧಿ ಪಡೆದಿದೆ. ಬಾಲಗಂಗಾಧರನಾಥರ ಭೈರವೈಕ್ಯ ಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು ಆಗಮಿಸಿದ್ದು ಸಂತಸ ತಂದಿದೆ ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಬಣ್ಣಿಸಿದರು. ಭೈರವೈಕ್ಯ ಮಂದಿರ‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಹೆಚ್‌ಡಿಕೆ, ಸಣ್ಣ ಮಠವನ್ನು ದೊಡ್ಡ ಮರವನ್ನಾಗಿ ಬೆಳೆಸಿದ್ದು ಬಾಲಗಂಗಾಧರನಾಥರು‌. ರೈತರ‌ ಮಕ್ಕಳ ಜ್ಞಾನಾರ್ಜನೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಜೋಳಿಗೆಯನ್ನು ಹಿಡಿದು ಈ ಮಠ ಕಟ್ಟಿದ್ದಾರೆ ಎಂದು ಸ್ಮರಿಸಿದರು.

ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಇಡೀ ದೇಶವ್ಯಾಪಿ ಚುಂಚನಗಿರಿ ಮಠಕ್ಕೆ ಒಳ್ಳೆಯ ಹೆಸರಿದೆ. ಬಡಮಕ್ಕಳಿಗೆ ವಿದ್ಯಾದಾನ ಮಾಡಿರುವ ಕೀರ್ತಿ ಶ್ರೀಗಳಿಗೆ ಇದೆ. ಬಾಲಗಂಗಾಧರನಾಥರ ಭೈರವೈಕ್ಯ ಮಂದಿರ ಉದ್ಘಾಟನೆಗೆ ಮೋದಿಯವರು ಆಗಮಿಸಿರುವುದು ಸಂತಸ. ಮೋದಿಯವರ ನಾಯಕತ್ವದಲ್ಲಿ ದೇಶ‌ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.

ನಿರ್ಮಲಾನಂದನಾಥ ಶ್ರೀ ಮಾತನಾಡಿ, 1800 ವರ್ಷಗಳ ಇತಿಹಾಸವನ್ನು ಚುಂಚನಗಿರಿ ಹೊಂದಿದೆ. ಶ್ರೀ ಮಠದ 71 ನೇ ಪೀಠಾಧಿಪತಿಗಳಾಗಿ ಬಾಲಗಂಗಾಧರನಾಥ ಶ್ರೀಗಳು ಇದ್ದರು. ಇಂದು ಅವರ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ಅವರು ಬಂದಿರುವುದು ಸಂತಸ. ಮಣ್ಣಿನ ಮಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಂದಿದ್ದಾರೆ. ಚುಂಚನಗಿರಿ ಮಠ ಆಧ್ಯಾತ್ಮಕ ಶಕ್ತಿಗೆ ಹೆಸರುವಾಸಿಯಾಗಿದೆ. ಕೋಟ್ಯಂತರ ಭಕ್ತರ ಆಸೆ ಇಂದು ಈಡೇರಿದೆ ಎಂದು ತಿಳಿಸಿದರು.

2022ರಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಮೋದಿ ಅವರು ಬಂದಿದ್ದರು. ಆಗ ಅವರು ಕೆಂಪೇಗೌಡರ ಆಲೋಚನೆಗಳನ್ನು ಸರ್ಕಾರಗಳು ಅಳವಡಿಸಿಕೊಳ್ಳಬೇಕು ಎಂದಿದ್ದರು. ದೇಶದ ಅಭಿವೃದ್ಧಿಗೆ ಮೋದಿ ಅವರು ಶ್ರಮಿಸುತ್ತಿದ್ದಾರೆ. ಸಿದ್ಧಾಂತಗಳನ್ನು ಇಟ್ಟುಕೊಂಡು ಮೋದಿ ಅವರು ದೇಶ ಕಟ್ಟುತ್ತಿದ್ದಾರೆ. ಮೋದಿ ಅವರು ಪ್ರಧಾನಿ ಆದ ಬಳಿಕ ಸ್ಟಾರ್ಟಪ್‌ಗಳು ಹೆಚ್ಚಿವೆ. 400 ಇದ್ದ ಸ್ಟಾರ್ಟಪ್‌ಗಳು ಇದೀಗ 2 ಲಕ್ಷಕ್ಕೂ ಅಧಿಕ ಇವೆ. ಇದು ದೇಶದ ಆರ್ಥಿಕತೆ ಹೇಗಿದೆ ಅನ್ನೋದನ್ನು ತಿಳಿಸುತ್ತೆ. ಹೀಗೆ, ಹಲವಾರು ಕ್ಷೇತ್ರಗಳಲ್ಲಿ ಮೋದಿ ಅವರು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಬಣ್ಣಿಸಿದರು.

ನಮ್ಮ ಬಾಲಗಂಗಾಧರನಾಥ ಶ್ರೀಗಳು ಸಮಾಜಕ್ಕೆ ಹಲವು ಕೊಡುಗೆ ಮಾಡಿದ್ದಾರೆ. ತ್ರಿವಿಧ ದಾಸೋಹದ ಮೂಲಕ ಹೆಸರು ಅಜರಾಮರವಾಗಿದೆ. ಅವರು ದೇಹ ಬಿಟ್ಟಿದ್ದರೂ, ಅವರು ನಮ್ಮೊಟ್ಟಿಗೆ ಇದ್ದಾರೆ. ಇಂತಹ ಗುರುಗಳ ಮಂದಿರವನ್ನು ಮೋದಿ ಅವರು ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ. ಹಳ್ಳಿಯ ಮಕ್ಕಳಿಗೆ ಶಿಕ್ಷಣ ನೀಡಿದೆ ಶ್ರೀ ಮಠ. ಬಾಲಗಂಗಾಧರನಾಥ ಶ್ರೀಗಳ ಚಿಂತನೆಗಳು ಇಂದಿಗೂ ಜನರಲ್ಲಿ ಮೂಡಿವೆ. ಮೋದಿ ಅವರು ಇಂದು ಚುಂಚನಗಿರಿಗೆ ಬಂದಿರೋದಕ್ಕೆ ನಮ್ಮ ಕೃತಜ್ಞತೆಗಳು ಎಂದು ತಿಳಿಸಿದರು.